ಕೊಪ್ಪಳ: ಜಿಲ್ಲಾ ಕೇಂದ್ರ ಕೊಪ್ಪಳದ ಗಾಂಧಿನಗರದಲ್ಲಿನ ಅನೇಕ ಬಡ ಕುಟುಂಬಗಳೂ ಸೇರಿದಂತೆ ಗುಳೆ ಹೋಗಿ ಜಿಲ್ಲೆಗೆ ಬಂದಿರುವ ಅನೇಕ ಕಾರ್ಮಿಕರ ಕುಟುಂಬಗಳಿಗೆ ಪಡಿತರ ಚೀಟಿಗಳಿಲ್ಲ ಎಂಬುದು ಗಮನಕ್ಕೆ ಬಂದಿದೆ. ಈ ಕುರಿತಂತೆ ಆಯಾ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದ್ದಾರೆ.
ಜಿಲ್ಲಾ ಕೇಂದ್ರ ಕೊಪ್ಪಳದ ಗಾಂಧಿ ನಗರದಲ್ಲಿನ ಕೊರಚ ಸಮುದಾಯದ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳಿಗೆ ‘ಅತ್ತ ದುಡಿಮೆಯೂ ಇಲ್ಲ, ಇತ್ತ ಪಡಿತರ ಚೀಟಿಯೂ ಇಲ್ಲ: ಸಂಕಷ್ಟದಲ್ಲಿ ಕೊರಚ ಸಮುದಾಯದ ಜನರು’ ಎಂಬ ಶೀರ್ಷಿಕೆಯೊಂದಿಗೆ ಈಟಿವಿ ಭಾರತ ವರದಿ ಪ್ರಕಟಿಸಿತ್ತು.
ವಲಸೆ ಅಥವಾ ಗುಳೆ ಹೋಗಿ ವಾಪಸ್ ಬಂದಿರುವ ಅನೇಕ ಕಾರ್ಮಿಕ ಕುಟುಂಬಗಳಿಗೆ ಪಡಿತರ ಚೀಟಿ ಇಲ್ಲದಿರುವ ಕುರಿತು ದೂರುಗಳಿವೆ. ಅವರು ಸಂಬಂಧಿಸಿದ ತಹಶೀಲ್ದಾರರು ಮತ್ತು ಆಹಾರ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಅಗತ್ಯ ಸಹಾಯ ಪಡೆಯಬಹುದು. ಒಂದು ವೇಳೆ ಪಡಿತರ ಚೀಟಿ ಇಲ್ಲದಿದ್ದರೂ ಸಹ ಗ್ರಾಮ ಲೆಕ್ಕಾಧಿಕಾರಿಗಳನ್ನು ಭೇಟಿ ಮಾಡಿ ಸಹಾಯ ಪಡೆಯಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.