ಕುಷ್ಟಗಿ(ಕೊಪ್ಪಳ): ಕ್ಷೇತ್ರದ ಅಭಿವೃಧ್ಧಿಯ ಇಚ್ಛಾಶಕ್ತಿ ಇಲ್ಲದ ಶಾಸಕರೆಂದರೆ ಅಮರೇಗೌಡ ಪಾಟೀಲ ಬಯ್ಯಾಪೂರ ಆಗಿದ್ದು, ಅವರಿಗೆ ತಮ್ಮ ಚುನಾವಣೆ ಮಾಡುವುದು ಗೊತ್ತೇ ವಿನಃ ಕ್ಷೇತ್ರದ ಅಭಿವೃದ್ದಿ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲ ಎಂದು ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಾಸಕ ಬಯ್ಯಾಪೂರ ಅವರಿಗೆ ಕ್ಷೇತ್ರ ಅಭಿವೃದ್ದಿಯ ಬಗ್ಗೆ ಇಚ್ಛಾಶಕ್ತಿ ಇಲ್ಲ. ಈ ಹಿಂದೆ ಅವರದೇ ಕಾಂಗ್ರೆಸ್ ಸರ್ಕಾರವಿದ್ದರೂ, ಕೃಷ್ಣಾ ಬಿಸ್ಕೀಂ ಕೊಪ್ಪಳ ಏತ ನೀರಾವರಿ ಯೋಜನೆ ಕಾರ್ಯಗತದ ಬಗ್ಗೆ ಇಚ್ಛಾಶಕ್ತಿ ಪ್ರದರ್ಶಿಸಲಿಲ್ಲ. ಯಡಿಯೂರಪ್ಪ ಸಿಎಂ ಆದ ಬಳಿಕ ಕೊಪ್ಪಳ ಸಂಸದ ಕರಡಿ ಸಂಗಣ್ಣ ಹಾಗೂ ನಾವುಗಳು ಸದರಿ ಯೋಜನೆ ಅಭಿವೃಧ್ಧಿಗೆ ಗಮನ ಹರಿಸಿದ್ದೇವೆ.
ಶಾಸಕ ಬಯ್ಯಾಪೂರ ಅವರಿಗೆ ಕೃಷ್ಣಾ ಬಿಸ್ಕೀಂ ಕೊಪ್ಪಳ ಏತ ನೀರಾವರಿ ಯೋಜನೆ ಬಗ್ಗೆ ಮೊದಲಿನಿಂದಲೂ ಇಚ್ಛಾಶಕ್ತಿ ಇಲ್ಲ. ಈಗ ಸದರಿ ಕಾಮಗಾರಿ ಮುಂದುವರೆದಿದ್ದು ಅದಕ್ಕೆ ಸಾಥ್ ನೀಡದೇ, ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಯ್ಯಾಪೂರ ಅವರು ಏನೂ ಮಾಡದಿದ್ದರೂ ರಾಜಕೀಯ ಮಾಡುವುದೊಂದೇ ಗೊತ್ತಿದ್ದು, ಒಟ್ಟಿನಲ್ಲಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಾರೆ. ಅವರಿಗೆ ಕ್ಷೇತ್ರ ಅಭಿವೃಧ್ಧಿಯ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ. ಕಾಂಗ್ರೆಸ್ಸಿಗರಿಗೆ ಮೋದಿ ಬಗ್ಗೆ ಟೀಕಿಸುವುದು ಬಾಯಿ ಮಾತಾಗಿದೆ. ತಾವೇನು ಮಾಡಿದ್ದಾರೆನ್ನುವುದು ಗೊತ್ತಿಲ್ಲ ಪಾಪ, ಬರೀ ಮೋದಿ ಬಗ್ಗೆ ಮಾತನಾಡುವುದೇ ಆಗಿದೆ. ಮೋದಿ ಏನು ಮಾಡಿದ್ದಾರೆನ್ನುವುದನ್ನು ಪ್ರಶ್ನಿಸುವುದು ಬಿಟ್ಟರೆ ಏನೂ ಗೊತ್ತಿಲ್ಲ.
ಕೃಷ್ಣಾ ಬಿಸ್ಕೀಂ ಯೋಜನೆ ಪೂರ್ಣಗೊಳಿಸಲು ಯಾವುದೇ ಕಾಲಮಿತಿ ಏನೂ ಇಲ್ಲ. ಒಟ್ಟಿನಲ್ಲಿ ಪೂರ್ಣಗೊಳಿಸಬೇಕು ಅಷ್ಟೇ.. ಹೀಗಾಗಿ, ತ್ವರಿತಗತಿಯಲ್ಲಿ ಕೆಲಸ ಸಾಗಿದೆ. ಈಗಿನ ಕೋವಿಡ್ ಪರಿಸ್ಥಿತಿ ನಿರೀಕ್ಷಿಸಿರಲಿಲ್ಲ. ಈ ಕೋವಿಡ್ ಹಿನ್ನೆಲೆ ಸ್ವಲ್ಪ ಮಟ್ಟಿನ ಹಿನ್ನಡೆಗೆ ಕಾರಣವಾಗಿದೆ ಎಂದರು.
ಓದಿ: ಆಂಬುಲೆನ್ಸ್ನಿಂದ ಜಿಗಿದು ಕತ್ತು ಕೊಯ್ದುಕೊಂಡ ಮಾನಸಿಕ ಅಸ್ವಸ್ಥ - ಚಿಕಿತ್ಸೆ ಫಲಿಸದೇ ಸಾವು