ಕೊಪ್ಪಳ: ಪಿಯು ಕಾಲೇಜುಗಳ ಪ್ರಾಚಾರ್ಯರ ಹಾಗೂ ಉಪನ್ಯಾಸಕರ ಸಂಘದಿಂದ ನಗರದ ಶ್ರೀ ಬಾಲಾಜಿ ಫಂಕ್ಷನ್ ಹಾಲ್ ನಲ್ಲಿ ಡಿಸೆಂಬರ್ 28 ರಂದು ಜಿಲ್ಲಾ ಮಟ್ಟದ ಮೊದಲ ಶೈಕ್ಷಣಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಪಿಯು ಕಾಲೇಜ್ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸೋಮನಗೌಡ ಪಾಟೀಲ್ ಹೇಳಿದರು.
ನಗರದ ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಅವರು, ನಮ್ಮ ಸಂಘ ಕೇವಲ ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅಷ್ಟೆ ಇಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಕೆಲಸ ಮಾಡುತ್ತದೆ. ಹೀಗಾಗಿ, ಡಿಸೆಂಬರ್ 28 ರಂದು ನಡೆಯಲಿರುವ ಜಿಲ್ಲಾ ಮಟ್ಟದ ಮೊದಲ ಶೈಕ್ಷಣಿಕ ಸಮ್ಮೇಳನದಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗುತ್ತದೆ ಎಂದರು.
ಇನ್ನು ಬರುವ ಮಾರ್ಚ್ ನಲ್ಲಿ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಕೊಪ್ಪಳ ಜಿಲ್ಲೆ 10 ನೇ ಸ್ಥಾನ ಪಡೆಯಬೇಕು ಎಂಬ ಉದ್ದೇಶದಿಂದ ಈ ಜಿಲ್ಲಾ ಮಟ್ಟದ ಮೊದಲ ಶೈಕ್ಷಣಿಕ ಸಮ್ಮೇಳನ ನಡೆಯಲಿದೆ. ಈ ಕುರಿತಂತೆ ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ನೂರು ಪಿಯು ಕಾಲೇಜುಗಳಿವೆ. ಇದರಲ್ಲಿ ಸರ್ಕಾರಿ 38 ಕಾಲೇಜು, ಅನುದಾನಿತ 09 ಹಾಗೂ ಖಾಸಗಿ ಪಿಯು ಕಾಲೇಜು 48 ಮತ್ತು ಐದು ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು ಇವೆ. ರಾಜ್ಯದ ಎಲ್ಲ ಪಿಯು ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಬೇಕು ಎಂಬ ಒತ್ತಾಯ ಮಾಡಲಾಗುತ್ತದೆ ಎಂದರು.