ಕೊಪ್ಪಳ: ನಾಡಿನ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಕೊಪ್ಪಳದ ಶ್ರೀಗವಿಮಠ ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಈ ಜಾತ್ರೆಯ ಆಹ್ವಾನಕ್ಕೆ ಡಿಜಿಟಲ್ ಟಚ್ ನೀಡಲಾಗಿದ್ದು ವಿಡಿಯೋ ಆಮಂತ್ರಣದ ಮೂಲಕ ಯಾತ್ರಾರ್ಥಿಗಳನ್ನು ಆಹ್ವಾನಿಸಿಲಾಗಿದೆ.
ದಕ್ಷಿಣ ಭಾರತದ ಮಹಾಕುಂಭ ಮೇಳ ಎಂದು ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಮಠದ ಜಾತ್ರೆ ಇದೇ ಜನವರಿ 12ರಿಂದ ಆರಂಭವಾಗಲಿದೆ. ಮೂರು ದಿನಗಳ ಕಾಲ ನಡೆಯಲಿರುವ ಜಾತ್ರಾ ಮಹೋತ್ಸವ ಜನವರಿ 14ರಂದು ಸಂಪನ್ನಗೊಳ್ಳಲಿದೆ. ಈ ನಿಟ್ಟಿನಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.
ಡ್ರೋಣ್ ಕ್ಯಾಮರಾ ಬಳಸಿಕೊಂಡು ಜಾತ್ರಾ ವೈಭವದ ವಿಡಿಯೋ, ವಿದ್ಯುತ್ ದೀಪಾಲಂಕಾರಗೊಂಡಿರುವ ಶ್ರೀಮಠದ ನಯನ ಮನೋಹರವಾಗಿರುವ ದೃಶ್ಯಗಳನ್ನು ಬಳಸಿಕೊಂಡು ಡಿಜಿಟಲ್ ಆಮಂತ್ರಣ ತಯಾರಿಸಲಾಗಿದೆ. ಇನ್ನು ಶಾಲಾ ಮಕ್ಕಳನ್ನು ಅಕ್ಷರ ರೂಪದಲ್ಲಿ ಕುಳ್ಳಿರಿಸಿ ಅಜ್ಜನ ಜಾತ್ರೆಗೆ ಬನ್ನಿ ಎಂದು ಆಹ್ವಾನಿಸಲಾಗಿದೆ. ಸುಂದರವಾಗಿರುವ ಈ ಡಿಜಿಟಲ್ ಆಮಂತ್ರಣ ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿದೆ.
ಇನ್ನು ಐತಿಹಾಸಿಕ ಆನೆಗುಂದಿ ಉತ್ಸವವು ಜನವರಿ 9ರಿಂದ 10ರವರೆಗೆ ನಡೆಯಲಿದ್ದು, ಸಂಗೀತ ಹಾಗೂ ಕಲೆಗಳ ಭವ್ಯ ಪರಂಪರೆ ಮೆಲುಕು ಹಾಕುವ ಅನೇಕ ಕಾರ್ಯಕ್ರಮ ರೂಪಿಸಲಾಗಿದೆ. ಈ ಉತ್ಸವಕ್ಕೆ ಖ್ಯಾತ ಕಲಾವಿದರು ಆಗಮಿಸಲಿದ್ದು, ವಿಡಿಯೋ ಮೂಲಕ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಗೂ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ರವರು ಉತ್ಸವಕ್ಕೆ ಆಗಮಿಸುವಂತೆ ಆಹ್ವಾನಿಸಿದ್ದಾರೆ.