ಕೊಪ್ಪಳ: ಪಠ್ಯ ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಕುರಿತ ವಿಷಯ ಇರಬೇಕೋ ಬೇಡವೋ ಎಂಬ ತೀರ್ಮಾನವನ್ನ ಸಾರ್ವಜನಿಕರ ಅಭಿಪ್ರಾಯಕ್ಕೆ ಬಿಡಲಾಗಿದೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ವಿಷಯದ ಬಗ್ಗೆ ವೈಯಕ್ತಿಕ ನಿಲುವು ಇರುವುದಿಲ್ಲ. ಸರ್ಕಾರದ ನಿಲುವು ಇರುತ್ತದೆ. ಸಾಕಷ್ಟು ಚರ್ಚೆಯಾಗುತ್ತಿರುವ ಟಿಪ್ಪು ಸುಲ್ತಾನನ ಕುರಿತು ಪಠ್ಯ ಪುಸ್ತಕದಲ್ಲಿ ಇರಬೇಕೋ ಅಥವಾ ಬೇಡವೋ ಎಂಬುದನ್ನ ಸಾರ್ವಜನಿಕರ ಅಭಿಪ್ರಾಯಕ್ಕೆ ಬಿಡಲಾಗಿದೆ. ಸಾರ್ವಜನಿಕರ ಅಭಿಪ್ರಾಯದ ಮೇಲೆ ಸರ್ಕಾರ ತನ್ನ ನಿರ್ಧಾರ ತೆಗೆದುಕೊಳ್ಳಲಿದೆ. ಆಡಳಿತದ ವಿಚಾರದಲ್ಲಿ ಆರ್ಎಸ್ಎಸ್ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಮೊದಲಿನಿಂದಲೂ ರಾಷ್ಟ್ರಧ್ವಜದ ಜೊತೆಗೆ ಕನ್ನಡ ಧ್ವಜ ಹಾರಿಸಲಾಗುತ್ತಿತ್ತು. ಈ ಬಾರಿ ಆಗಿರುವ ಗೊಂದಲದ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು. ಅಲ್ಲದೆ, ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ನಮ್ಮ ಪಕ್ಷದ ಹಿರಿಯ ಶಾಸಕರು. ಅವರು ಏನೇ ಮಾತನಾಡಿದರೂ ಅದು ನಮಗೆ ಆಶೀರ್ವಾದವಿದ್ದಂತೆ ಎಂದು ಸವದಿ ಹೇಳಿದ್ರು.
ನನಗೆ ಜವಾಬ್ದಾರಿ ನೀಡಿದ್ದ ಪಶ್ಚಿಮ ಮಹಾರಾಷ್ಟ್ರದ 6 ಜಿಲ್ಲೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಹೆಚ್ಚು ಗೆದ್ದಿದ್ದಾರೆ. ಸರ್ಕಾರ ರಚನೆಗೆ ಪೂರಕ ವಾತಾವರಣ ಇಲ್ಲಿ ನಿರ್ಮಾಣವಾಗಿದೆ ಎಂದು ಸವದಿ ಸಮರ್ಥಿಸಿಕೊಂಡರು. ಇನ್ನು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಳಗಾವಿ ಭಾಗದಲ್ಲಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾಗ ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವಿರಬೇಕು. ಹೀಗಾಗಿ ಸರ್ಕಾರವನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ. ಅವರ ನಿಲುವನ್ನು ಸ್ವಾಗತಿಸುತ್ತೇನೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.