ಕುಷ್ಟಗಿ(ಕೊಪ್ಪಳ) : ಇಡೀ ದೇಶದಲ್ಲಿ ಇಂದು ಕಾಂಗ್ರೆಸ್ ಪಕ್ಷ ಅನಾಥವಾಗಿದೆ. ಯಾವ ರಾಜ್ಯದಲ್ಲಿಯೂ ಸರ್ಕಾರ ತರುವಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಮೊನ್ನೆ ನಡೆದ ಪಂಚ ರಾಜ್ಯ ಚುನಾವಣೆಯಲ್ಲಿಯೂ ಕಾಂಗ್ರೆಸ್ ಹೀನಾಯ ಸೋಲನ್ನು ಕಂಡಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಕುಷ್ಟಗಿಯ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾ ಮಂಟಪದಲ್ಲಿ ತಾಲೂಕಿನ ದೇವದಾಸಿಯರಿಗೆ ಸರ್ಕಾರ ಖರೀದಿಸಿದ ಜಮೀನಿನ ಖರೀದಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಾಂಗ್ರೆಸ್ ದಲಿತರನ್ನು, ಅಲ್ಪ ಸಂಖ್ಯಾತರನ್ನು, ಹಿಂದುಳಿದವರನ್ನು ವೋಟ್ ಬ್ಯಾಂಕ್ ಮಾಡಿಕೊಂಡು 60 ವರ್ಷ ಆಡಳಿತ ಮಾಡಿದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ವಿದ್ಯಾವಂತರಾಗಿ ತಿಳುವಳಿಕೆ ಬಂದಾಗ ಕಾಂಗ್ರೆಸ್ನಿಂದ ದೂರ ಸರಿದಿದ್ದಾರೆ. ಹೀಗಾಗಿ, ಕಾಂಗ್ರೆಸ್ ಪಕ್ಷ ಅನಾಥವಾಗುತ್ತಿದೆ ಎಂದರು.
ಕಳೆದ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಕಂಡಿದೆ. ಮಹಾತ್ಮ ಗಾಂಧೀಜಿಯವರು ಹೇಳಿದಂತೆ ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಲ್ಲ. ಸ್ವಾತಂತ್ರ್ಯ ಹೋರಾಟಕ್ಕಾಗಿ ಕಟ್ಟಿಕೊಂಡ ಸಂಘಟನೆಯಾಗಿದ್ದು, ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ವಿಸರ್ಜನೆ ಮಾಡಲು ಹೇಳಿದ್ದರು. ಮಹಾತ್ಮ ಗಾಂಧೀಜಿಯವರು ಹೇಳಿದ ಮಾತು ಅಂದು ಆಗಲಿಲ್ಲ, ಈಗ ಆಗುತ್ತಿದೆ ಎಂದರು.
ಸಿಎಂ ಬದಲಾವಣೆ ಅಜೆಂಡಾ ಇಲ್ಲ : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಅಜೆಂಡಾ ಇಲ್ಲ. ಮುಂದಿನ ಎರಡು ವರ್ಷಗಳವರೆಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿರುತ್ತಾರೆ. ಯಡಿಯೂರಪ್ಪ ನಾಯಕತ್ವದಲ್ಲಿ ಸರ್ಕಾರ ನಡೆಯಲಿದೆ ಎಂದರು.
ರಾಯಚೂರಿನಲ್ಲಿ ಭೂ ಒಡೆತನ ಯೋಜನೆಯ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಸಚಿವನಾಗಿದ್ದ ಸಂದರ್ಭದಲ್ಲಿ ನಾನೇ ಸ್ವತಃ ರಾಯಚೂರಿಗೆ ಹೋಗಿ, ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತು ಮಾಡಿ, ತನಿಖೆ ಕೈಕೊಳ್ಳಲಾಗಿತ್ತು. ನಂತರ ಸಮಾಜ ಕಲ್ಯಾಣ ಖಾತೆ ಬದಲಾದಾಗ ಇನ್ನೊಬ್ಬರು ಮಂತ್ರಿಗಳಾಗಿದ್ದರಿಂದ ಸದರಿ ಪ್ರಕರಣ ಪುನರಾವಲೋಕನ ಮಾಡಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟಪಡಿಸಿದರು.
ದಲಿತರ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣಗಳ ಬಗ್ಗೆ ಪ್ರಸ್ತಾಪಿಸಿದ ಡಿಸಿಎಂ ಎಲ್ಲಿಯವರೆಗೂ ಸಾಮಾಜಿಕ ಕಳಕಳಿ, ಕಾಳಜಿ ಆಗುವುದಿಲ್ಲವೋ ಅಲ್ಲಿಯವರೆಗೂ ದೌರ್ಜನ್ಯ ಪ್ರಕರಣ ನಡೆಯುತ್ತವೆ. ಅದಕ್ಕಾಗಿ ಸರ್ಕಾರ ಪ್ರತಿಬಂಧಕ ಕಾನೂನು ಹಾಗೂ ವಿಶೇಷ ನ್ಯಾಯಾಲಯ ಸ್ಥಾಪಿಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುತ್ತಿದೆ. ಯಾರು ನೊಂದಿರುತ್ತಾರೋ ಅಂತಹ ಕುಟುಂಬಗಳಿಗೆ ಪರಿಹಾರ ಸಹ ನೀಡುತ್ತಿದೆ ಎಂದರು.