ಕುಷ್ಟಗಿ /ಕೊಪ್ಪಳ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬಹು ಕಮಾನು ತಡೆಗೋಡೆ ಅನುದಾನದಲ್ಲಿ ಕೋಟ್ಯಂತರ ರೂಪಅಯಿ ದುರುಪಯೋಗ ಹಾಗೂ ಸರ್ಕಾರಕ್ಕೆ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ನಾಲ್ವರು ಪಿಡಿಒ ಅಧಿಕಾರಿಗಳ ವಿರುದ್ಧ ಕುಷ್ಟಗಿ, ಹನುಮಸಾಗರ ಹಾಗೂ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಕ್ರಿಮಿನಲ್ ಕೇಸ್ ದಾಖಲಾಗಿದೆ.
ತಳವಗೇರಾ ಗ್ರಾ.ಪಂ. ಪಿಡಿಒ ಶಿವಪುತ್ರಪ್ಪ ಬರಿದೆಲಿ ಅವರು 2 ಎಫ್ ಟಿ ಒ ಮೂಲಕ 10,46,446 ರೂ. , ಹಾಬಲಕಟ್ಟಿ ಗ್ರಾ.ಪಂ. ಪಿಡಿಒ ಚಂದಪ್ಪ ಕವಡಿಕಾಯಿ ಅವರು 2 ಎಫ್ ಟಿ ಒ ಮೂಲಕ ಒಟ್ಟು 33,23,628 ರೂ., ಹಿರೆಗೊಣ್ಣಗರ ಗ್ರಾ.ಪಂ ಪಿಡಿಒ ಯಮನಪ್ಪ ರಾಮತ್ನಾಳ ಅವರು 1 ಎಫ್ ಟಿಒ ಮೂಲಕ 3,76,155 ರೂ. ಹಾಗೂ ಮುದೇನೂರು ಗ್ರಾ.ಪಂ. ಪಿಡಿಒ ವೆಂಕಟೇಶ ಪವಾರ ಅವರು 23 ಎಫ್ ಟಿ ಒ ಮೂಲಕ 1,04,31,771 ರೂಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕಾಮಗಾರಿ ಪರಿಶೀಲಿಸಿ ನೀಡಿದ ವರದಿ ಅನ್ವಯ ತಾ.ಪಂ. ಅಧಿಕಾರಿಗಳು ಶಿವಪುತ್ರಪ್ಪ ಬರಿದೆಲಿ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ, ಹಾಬಲಕಟ್ಟಿ ಗ್ರಾ.ಪಂ. ಪಿಡಿಒ ಚಂದಪ್ಪ ಕವಡಿಕಾಯಿ, ಹಿರೇಗೊಣ್ಣಾಗರ ಗ್ರಾ.ಪಂ. ಪಿಡಿಒ ಯಮನಪ್ಪ ರಾಮತ್ನಾಳ ವಿರುದ್ಧ ಹನುಮಸಾಗರ ಪೊಲೀಸ್ ಠಾಣೆ ಹಾಗೂ ಮುದೇನೂರು ಪಿಡಿಒ ವೆಂಕಟೇಶ ಪವಾರ ವಿರುದ್ಧ ತಾವರಗೇರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ನಾಲ್ವರು ಪಿಡಿಒ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಿದೆ.