ಗಂಗಾವತಿ (ಕೊಪ್ಪಳ) :ಉಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಕೊಪ್ಪಳ ಜಿಲ್ಲಾಡಳಿತ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸುವುದಾಗಿ ಅಂಜನಾದ್ರಿಯ ಪದಚ್ಯುತ ಪೀಠಾಧಿಪತಿ ವಿದ್ಯಾದಾಸ ಹೇಳಿದರು.
ನಗರದಲ್ಲಿ ಮಾತನಾಡಿದ ವಿದ್ಯಾದಾಸ, 2019ರಲ್ಲಿ ರಾಜ್ಯ ಉಚ್ಛ ನ್ಯಾಯಾಲಯ ಬೆಳಗ್ಗೆ ಮತ್ತು ಸಂಜೆ ಅಂಜನಾದ್ರಿ ದೇಗುಲದಲ್ಲಿ ಪೂಜೆಗೆ ಅವಕಾಶ ನೀಡುವಂತೆ ಆದೇಶ ನೀಡಿತ್ತು. ಆದರೆ ಕೊಪ್ಪಳದ ಜಿಲ್ಲಾಡಳಿತ ಉದ್ದೇಶ ಪೂರ್ವಕವಾಗಿ ಕೆಲ ರಾಜಕೀಯ ಹಿತಾಸಕ್ತಿಗೆ ಅನುಗುಣವಾಗಿ ನನ್ನ ಧಾರ್ಮಿಕ ಹಕ್ಕನ್ನು ಮೊಟಕು ಮಾಡುತ್ತಿದೆ ಎಂದು ಆರೋಪಿಸಿದರು.
ಆರು ತಿಂಗಳ ಹಿಂದೆ ರಾಜ್ಯಪಾಲರನ್ನು ಭೇಟಿಯಾಗಿ ಅಂಜನಾದ್ರಿಗೆ ಆಗಮಿಸುವಂತೆ ಮನವಿ ಮಾಡಿದ್ದೆ. ಈ ಹಿನ್ನೆಲೆ ರಾಜ್ಯಪಾಲರು ಆಗಮಿಸಿದ್ದರು. ಸ್ವತಃ ರಾಜಭವನದಿಂದ ನನಗೆ ಕರೆ ಮಾಡಿ ಪೂಜೆಗೆ ವ್ಯವಸ್ಥೆ ಮಾಡುವಂತೆ ತಿಳಿಸಿದ್ದರು, ಆದರೆ ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡಲಿಲ್ಲ. ಈ ಬಗ್ಗೆ ರಾಜ್ಯಪಾಲರ ಗಮನ ಸೆಳಯಲು ಯತ್ನಿಸುವ ವೇಳೆ ನನ್ನನ್ನು ಎಳೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು.
ಈ ಹಿಂದೆಯೂ ನ್ಯಾಯಾಂಗ ನಿಂದನೆ ಪ್ರಕರಣ ನಡೆದಾಗ ಜಿಲ್ಲಾಡಳಿತ ವಿರುದ್ಧ ದೂರು ದಾಖಲಿಸಿದ್ದೆ. ಅಂದಿನ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಅಲೆದಾಡಿ ತಪ್ಪೊಪ್ಪುಗೆ ಬರೆದುಕೊಟ್ಟಿದ್ದರು. ಮತ್ತೀಗ ಜಿಲ್ಲಾಡಳತ ಅದೇ ದಾರಿ ಹಿಡಿದಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ :ವಕೀಲ ಜಗದೀಶ್ ಗೆ 2 ಲಕ್ಷ ರೂ ದಂಡ : ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಟ್ಟ ಹೈಕೋರ್ಟ್