ಕೊಪ್ಪಳ: ಇತ್ತೀಚಿಗೆ ನಡೆದ ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿದ ಬಿಜೆಪಿಯ 6 ಸದಸ್ಯರ ಸದಸ್ಯತ್ವ ರದ್ಧತಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ್ ಇಂದು ಜಿಲ್ಲಾ ಪಂಚಾಯತ್ ಸಿಇಓ ರಘುನಂದನಮೂರ್ತಿ ಅವರಿಗೆ ದೂರು ನೀಡಿದ್ದಾರೆ.
ಇತ್ತೀಚಿಗೆ ನಡೆದ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಬಿಜೆಪಿ 6 ಜನ ಸದಸ್ಯರಾದ ಪ್ರೇಮಾ ಈರಪ್ಪ ಕುಡಗುಂಟಿ, ವಿಜಯಕುಮಾರ್ ಲಮಾಣಿ, ಜೈನರ ಶರಣಮ್ಮ ಸಂಗನಗೌಡ ಟೆಂಗುಂಟಿ, ಭಾಗ್ಯವತಿ ಮಾಣಿಕ ಬೊಲಾ, ಸಿ.ವಿಜಯಲಕ್ಷ್ಮಿ ಪಲ್ಲೇದ ಕಡೂರ, ಭಾವಿಮನಿ ನೀಲಮ್ಮ ಅಡಿವೆಪ್ಪ ಬಂಡಿ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದರು.
ಹೀಗಾಗಿ ಈ 6 ಜನ ಸದಸ್ಯರ ಸದಸ್ಯತ್ವವನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅವರ ರದ್ದುಪಡಿಸುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ ಅವರು ಜಿಲ್ಲಾ ಪಂಚಾಯತಿ ಸಿಇಓ ರಘುನಂದನ ಮೂರ್ತಿ ಅವರಿಗೆ ಲಿಖಿತ ದೂರನ್ನು ನೀಡಿದ್ದಾರೆ.
ಇದರ ಜೊತೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಇಟಗಿ ಕ್ಷೇತ್ರದ ಸದಸ್ಯೆ ಗಂಗಮ್ಮ ಈಶಣ್ಣ ಗುಳಗಣ್ಣವರ ಅವರು ಸಹ ಈ 6 ಜನ ಸದಸ್ಯರ ಸದಸ್ಯತ್ವ ರದ್ದತಿಗೆ ಇದೇ ಸಂದರ್ಭದಲ್ಲಿ ದೂರು ಸಲ್ಲಿಸಿದ್ದಾರೆ. ಕೊಪ್ಪಳ ಗ್ರಾಮೀಣ ಮಂಡಲ ಅಧ್ಯಕ್ಷ ಪ್ರದೀಪ ಹಿಟ್ನಾಳ, ಮಂಡಲ ಪ್ರಧಾನ ಕಾರ್ಯದರ್ಶಿ ಪಿ.ಬಿ. ಹೀರೆಮಠ ಜಿಲ್ಲಾ ಮಾಧ್ಯಮ ವಕ್ತಾರ ಬಸಲಿಂಗಯ್ಯ ಜಿ ಗದಗಿನಮಠ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.