ಕುಷ್ಟಗಿ (ಕೊಪ್ಪಳ): ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿ ನಂತರ ನ್ಯಾಯ ಪಂಚಾಯತಿಗೆ ಬರಲೊಪ್ಪದ ಆರೋಪಿ ವಿರುದ್ಧ ನೊಂದ ಬಾಲಕಿ ನೀಡಿದ ದೂರಿನನ್ವಯ ಪೋಕ್ಸೋ ಪ್ರಕರಣ ದಾಖಲಾಗಿದೆ.
ತಾಲೂಕಿನ ಗ್ರಾಮವೊಂದರಲ್ಲಿ ಅ. 16ರಂದು ಬಾಲಕಿ ತಂದೆ-ತಾಯಿ ಸಜ್ಜೆ ಕಟಾವಿಗೆ ಹೋಗಿದ್ದ ಸಂದರ್ಭದಲ್ಲಿ ಬಾಲಕಿಯೊಬ್ಬಳೇ ಮನೆಯಲ್ಲಿದ್ದಳು. ಈ ಸಮಯದಲ್ಲಿ ಅದೇ ಗ್ರಾಮದ ಸಣ್ಣ ಯಮನೂರು ಬಾಲಪ್ಪ ಗೌಡರ ಎಂಬಾತ ಬಾಲಕಿಯ ಮನೆಗೆ ತೆರಳಿ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.
ಮನೆಯಲ್ಲಿ ಮರೆತು ಹೋಗಿದ್ದ ಕುಡುಗೋಲು ತರಲು ಮನೆಗೆ ಬಂದಿದ್ದ ಬಾಲಕಿ ತಂದೆಗೆ ತನ್ನ ಮಗಳಿಗೆ ಸಣ್ಣ ಯಮನೂರುನಿಂದ ಅತ್ಯಾಚಾರವಾಗಿರುವುದು ಗೊತ್ತಾಗಿದೆ. ಆಗ ಸಣ್ಣ ಯಮನೂರ ಬಾಲಕಿಯನ್ನು ಮದುವೆಯಾಗುವುದಾಗಿ ತಿಳಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನಂತೆ. ಘಟನೆ ನಡೆದು ನಾಲ್ಕೈದು ದಿನಗಳಾದರೂ ಈ ವಿಷಯದ ಚಕಾರವೆತ್ತಿರಲಿಲ್ಲ. ಈ ಬಗ್ಗೆ ಗ್ರಾಮದ ಹಿರಿಯರ ಸಮಕ್ಷಮದಲ್ಲಿ ನ್ಯಾಯ ಪಂಚಾಯತಿ ಕರೆದರೂ ಸಣ್ಣ ಯಮನೂರು ಕಡೆಯವರು ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಾಲಕಿ ನೀಡಿದ ದೂರಿನನ್ವಯ ಸದರಿ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.