ಕೊಪ್ಪಳ: ತಾಲೂಕಿನ ಗಂಗನಾಳ ಗ್ರಾಮದ ಬಳಿ ಕರಡಿಯೊಂದು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಗ್ರಾಮದ ಪಕ್ಕದಲ್ಲಿರುವ ಬೆಟ್ಟದಿಂದ ಕರಡಿ ಬಂದಿದ್ದು, ಜಮೀನಿನಲ್ಲಿ ಓಡಾಡುತ್ತಿರುವ ದೃಶ್ಯವನ್ನು ರೈತರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಇದೀಗ ಮುಂಗಾರು ಕೃಷಿ ಚಟುವಟಿಕೆಗಳು ಶುರುವಾಗಿವೆ. ಇದರಿಂದಾಗಿ ರೈತರು ರಾತ್ರಿ ವೇಳೆ ಕೂಡ ಹೊಲಗಳಿಗೆ ಹೋಗುತ್ತಿರುತ್ತಾರೆ. ಒಬ್ಬೊಬ್ಬರಾಗಿ ಮಹಿಳೆಯರು, ಮಕ್ಕಳು ಹೊಲಕ್ಕೆ ಹೋಗ್ತಿರ್ತಾರೆ. ಇಂತಹ ಸಂದರ್ಭದಲ್ಲಿ ಕರಡಿ ದಾಳಿ ಮಾಡಿದರೆ ಏನು ಗತಿ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಈ ಭಾಗದ ಬೆಟ್ಟಗುಡ್ಡಗಳಲ್ಲಿ ಕರಡಿಗಳು ಇರುವುದರಿಂದ ಆತಂಕದಲ್ಲೇ ಬದುಕುವಂತಾಗಿದೆ. ಹೀಗಾಗಿ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.