ಗಂಗಾವತಿ (ಕೊಪ್ಪಳ) : ತುಂಗಭದ್ರಾ ನದಿಯಲ್ಲಿ ಪ್ರವಾಹ ಉಂಟಾಗಿ ನದಿಪಾತ್ರದಲ್ಲಿ ಬೆಳೆಯಲಾಗಿದ್ದ ಬಾಳೆ ಬೆಳೆಗೆ ಹಾನಿಯಾಗಿದ್ದು, ಈ ಸಂಬಂಧ ರೈತರಿಗೆ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರತ್ನಪ್ರಿಯಾ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಒಂದು ಹೆಕ್ಟೇರ್ ಬಾಳೆ ತೋಟಕ್ಕೆ ಕೇಂದ್ರ ಎನ್ಡಿಆರ್ಎಫ್ ಮತ್ತು ರಾಜ್ಯ ಸರ್ಕಾರದ ಎಸ್ಡಿಆರ್ಎಫ್ ನಿಯಮಕ್ಕೆ ಅನುಗುಣವಾಗಿ 13,500 ರೂಪಾಯಿ ನೀಡಲಾಗುತ್ತಿದೆ. ಸದ್ಯಕ್ಕೆ ಗಂಗಾವತಿ, ಕನಕಗಿರಿ ಮತ್ತು ಕಾರಟಗಿ ತಾಲ್ಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ತೋಟಗಾರಿಕಾ ಬೆಳೆಗೆ ಹಾನಿಯಾಗಿಲ್ಲ. ಆದರೆ ತುಂಗಭದ್ರಾ ನದಿಯ ಪಾತ್ರದಲ್ಲಿ ಅಲ್ಪ ಪ್ರಮಾಣದ ಬಾಳೆ ಬೆಳೆಗೆ ಹಾನಿಯಾಗಿದೆ. ನೀರಿನ ಪ್ರವಾಹ ನಿಂತ ಬಳಿಕವೇ ಹಾನಿಯ ಪ್ರಮಾಣ ಎಷ್ಟೆಂದು ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಸದ್ಯ ಬಾಳೆ ತೋಟದಲ್ಲಿ ನೀರು ನಿಂತಿರುವ ಪರಿಣಾಮ ಖಚಿತ ಸಮೀಕ್ಷೆ ಮಾಡಲು ಸಾಧ್ಯವಾಗಿಲ್ಲ. ನೀರಿನ ಪ್ರಮಾಣ ತಗ್ಗಿದ ಬಳಿಕ ಬಾಳೆಯ ಬೆಳೆಗೆ ತಗಲಬಹುದಾದ ರೋಗದ ಮೇಲೆ ಹಾನಿಯ ಪ್ರಮಾಣ ಖಚಿತವಾಗಿ ಗೊತ್ತಾಗಲಿದೆ ಎಂದು ಹಿರಿಯ ಸಹಾಯಕಿ ನಿರ್ದೇಶಕಿ ರತ್ನಪ್ರಿಯಾ ಮಾಹಿತಿ ನೀಡಿದ್ದಾರೆ.
ಓದಿ : ಪ್ರವಾಹಕ್ಕೆ ಕೊಚ್ಚಿಹೋಯ್ತು 60 ಎಕರೆ ಜಮೀನು.. ಪರಿಹಾರ ನೀಡದಿದ್ದರೆ ಸಾಮೂಹಿಕ ಆತ್ಮಹತ್ಯೆ ಎಂದ ರೈತರು