ಗಂಗಾವತಿ: ಸಂಘ ಪರಿವಾರದ ಮುಖಂಡ ಸಂತೋಷ್ ಕೆಲೋಜಿ ಮೇಲೆ ಮಧ್ಯರಾತ್ರಿ ದಾಳಿಗೆ ಯತ್ನಿಸಿದ ಘಟನೆ ಸಂಬಂಧ ಇಲ್ಲಿನ ನಗರಠಾಣೆಯಲ್ಲಿ ಕಾಂಗ್ರೆಸ್ ಮುಖಂಡ ಸೈಯದ್ ಅಲಿ ಹಾಗೂ ಇತರೆ ಇಪ್ಪತ್ತು ಜನರ ವಿರುದ್ಧ ದೂರು ದಾಖಲಾಗಿದೆ.
ಮಧ್ಯರಾತ್ರಿ ಸಂತೋಷ ಕೆಲೋಜಿ ಮನೆಯ ಸಮೀಪ ಬಂದಿದ್ದ ಆರೋಪಿಗಳು, ತನಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಹೊರಕ್ಕೆ ಬಂದ್ರೆ ಜೀವ ಸಹಿತ ಬಿಡುವುದಿಲ್ಲವೆಂದು ಅವಾಜ್ ಹಾಕಿ ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ದೂರುದಾರ ಉಲ್ಲೇಖಿಸಿದ್ದಾರೆ.
ಅಲ್ಲದೆ ಅದೇ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಸೈಯದ್ ಅಲಿ, ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರಲಿ, ನಿನ್ನ ಆಸ್ತಿಯ ತನಿಖೆ ನಡೆಸಿ ಎಲ್ಲಾ ಆಸ್ತಿಯನ್ನು ನಗರಸಭೆಯ ವಶಕ್ಕೆ ಪಡೆಯಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ ಎಂದು ಸಂತೋಷ್ ದೂರಿನಲ್ಲಿ ವಿವರಿಸಿದ್ದಾರೆ.
ಒಂದು ಕಾಲದ ಆಪ್ತ ಸ್ನೇಹಿತರಾಗಿದ್ದ ಸಂತೋಷ್ ಕೆಲೋಜಿ, ಸೈಯದ್ ಅಲಿ ಇಬ್ಬರೂ ಉತ್ತಮ ಒಡನಾಡಿಗಳಾಗಿದ್ದರು. ಇಬ್ಬರೂ ಸಂಘ ಪರಿವಾರದ ಹಿನ್ನೆಲೆ ಹೊಂದಿದ್ದಾರೆ. ಸೈಯದ್ ಅಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದರೂ ಆರ್ಎಸ್ಎಸ್ ನಲ್ಲಿ ಗುರುತಿಸಿಕೊಂಡಿದ್ದರು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬದ್ಧ ವೈರಿಗಳಂತಾಗಿದ್ದಾರೆ.