ಗಂಗಾವತಿ: ಮೊಹರಂ ಹಬ್ಬದ ಸಂದರ್ಭದಲ್ಲಿ ಬೆಂಕಿ ಕುಣಿಯ ಸುತ್ತಲು ಯುವಕರು ಕುಣಿಯುತ್ತಿದ್ದರು. ಆದರೆ ಈ ಧಾರ್ಮಿಕ ಆಚರಣೆಗೆ ತಡೆಯೊಡ್ಡಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ಮೇಲೆ ಹಲ್ಲೆ ಮಾಡಿದ ಘಟನೆ ತಾಲೂಕಿನ ಆರಾಳ ಗ್ರಾಮದಲ್ಲಿ ನಡೆದಿದೆ.
ಗಂಗಾವತಿ ಗ್ರಾಮೀಣ ಠಾಣೆಯ ಸೋಮನಾಥ ತಳವಾರ ಎಂಬ ಕಾನ್ಸ್ಟೇಬಲ್ ಮೇಲೆ ಗ್ರಾಮದ ಯುವಕರು ಹಲ್ಲೆ ಮಾಡಿದ್ದಾರೆ. ಇದೀಗ ಪೊಲೀಸ್ ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸ್ ಕಾನ್ಸ್ಟೇಬಲ್ ನೀಡಿದ ದೂರಿನ ಮೇಲೆ ಗ್ರಾಮದ 14 ಯುವಕರ ವಿರುದ್ಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಕೊರೊನಾ ಹಿನ್ನೆಲೆ ಮೊಹರಂ ಹಬ್ಬವನ್ನು ಸರಳವಾಗಿ ಆಚರಿಸುವಂತೆ ಸರ್ಕಾರ ಆದೇಶ ನೀಡಿತ್ತು. ಆದರೆ ಮೊಹರಂ ಕತ್ತಲ ರಾತ್ರಿಯಲ್ಲಿ ಸಾಮೂಹಿಕವಾಗಿ ಗುಂಪು ಕಟ್ಟಿಕೊಂಡು ಯುವಕರು ದೇವರ ಮುಂದೆ ಕುಣಿಯಲು ಯತ್ನಿಸಿದ್ದಕ್ಕೆ ಕಾನ್ಸ್ಟೇಬಲ್ ತಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಪಗೊಂಡ ಯುವಕರು ಪೊಲೀಸ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕೆಲ ಯುವಕರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದ್ದು, ಇನ್ನೂ ಕೆಲವರು ತಲೆಮರೆಸಿಕೊಂಡಿದ್ದಾರೆ ಎಂದು ಗ್ರಾಮೀಣ ಸಿಪಿಐ ಸುರೇಶ್ ತಳವಾರ ತಿಳಿಸಿದ್ದಾರೆ.