ಕೊಪ್ಪಳ: ಕೊರೊನಾ ಸೋಂಕಿನ ಭೀತಿ ಹಾಗೂ ಲಾಕ್ಡೌನ್ ನಿಂದ ಸಂಕಷ್ಟ ಅನುಭವಿಸಿರುವ ಜನರಿಗೆ, ಈಗ ಬೆಲೆ ಏರಿಕೆ ಹೈರಾಣು ಮಾಡುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕೃಷಿ ಚಟುವಟಿಕೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದ್ದು, ಅನ್ನದಾತರನ್ನು ಸಂಕಷ್ಟಕ್ಕೆ ಗುರಿಮಾಡಿದೆ. ಇದರಿಂದ ಜಿಲ್ಲೆಯಲ್ಲಿ ರೈತರು ಮುಂಗಾರು ಆರಂಭವಾಗುತ್ತಿದ್ದಂತೆ ಜಮೀನು ಹದ ಮಾಡಿ ಬೆಳೆ ಹಾಕಲು ಹಿಂದೇಟು ಹಾಕುತ್ತಿದ್ದಾರೆ.
ಓದಿ: ಡಿಕೆಶಿ, ಸಿದ್ದರಾಮಯ್ಯ ಫುಡ್ ಕಿಟ್ ವಿತರಣೆಯಲ್ಲಿ ಸಾಮಾಜಿಕ ಅಂತರ ಮಾಯ
ಈ ಬಾರಿ ಮುಂಗಾರು ಮಳೆ ಜಿಲ್ಲೆಯಲ್ಲಿ ಉತ್ತಮವಾಗಿ ಸುರಿದಿದೆ. ಹೀಗಾಗಿ ಮುಂಗಾರು ಬಿತ್ತನೆ ಚುರುಕಾಗಿ ನಡೆದಿದೆಯಾದರೂ ಬೆಲೆ ಏರಿಕೆಯ ಬಿಸಿ ರೈತರನ್ನು ಕಂಗಾಲಾಗಿಸಿದೆ. ಬಿತ್ತನೆಯ ಪೂರ್ವದ ಕೃಷಿ ಚಟುವಟಿಕೆ ಮಾಡಲು ರೈತರ ಜೇಬಿಗೆ ಕತ್ತರಿ ಬೀಳುತ್ತಿದೆ. ಲೀಟರ್ ಡೀಸೆಲ್ ಬೆಲೆ ಇಂದಿಗೆ ಬರೋಬ್ಬರಿ 93 ರೂಪಾಯಿಗೆ ತಲುಪಿದೆ. ಇದರಿಂದ ಟ್ರ್ಯಾಕ್ಟರ್ ಹಾಗೂ ಇತರ ಯಂತ್ರೋಪಕರಣಗಳನ್ನು ಕೃಷಿಗೆ ಬಳಕೆ ಮಾಡಿಕೊಂಡು ಕೃಷಿಯಲ್ಲಿ ತೊಡಗಿರುವ ಅನ್ನದಾತರನ್ನು ಕಂಗಾಲಾಗುವಂತೆ ಮಾಡಿದೆ.
ಬಹುಪಾಲು ರೈತರ ಬಳಿ ಈಗ ಎತ್ತುಗಳು ಇಲ್ಲ. ಉಳುಮೆಗಾಗಿ ಬಾಡಿಗೆ ಆಧಾರಿತ ಟ್ರ್ಯಾಕ್ಟರ್ ಬಳಸಿಕೊಳ್ಳುತ್ತಾರೆ. ಈ ಹಿಂದೆ ಒಂದು ಎಕರೆ ನೇಗಿಲು ಉಳುಮೆ ಮಾಡಲು 1500 ರಿಂದ 1600 ರೂಪಾಯಿ ಇತ್ತು. ಈಗ ಒಂದು ಎಕರೆ ನೇಗಿಲು ಉಳುಮೆ ಮಾಡಲು 2000 ಸಾವಿರ ರೂಪಾಯಿ ಇದೆ. ಇನ್ನು ಒಂದು ಎಕರೆ ಟಿಲ್ಲರ್ ಉಳುಮೆ ಮಾಡಲು ಮೊದಲು 450 ರೂಪಾಯಿ ಇತ್ತು. ಈಗ ಅದರ ದರ ಬರೋಬ್ಬರಿ 650 ರೂಗೆ ಹೆಚ್ಚಿದೆ.
ಇದಲ್ಲದೇ ರೂಟಾವೇಟರ್, ಕುಂಟಿಯಿಂದ ಹರಗುವುದು ಸೇರಿದಂತೆ ಟ್ರ್ಯಾಕ್ಟರ್ ಮೂಲಕ ಕೈಗೊಳ್ಳುವ ಎಲ್ಲ ಕೃಷಿ ಚಟುವಟಿಕೆಗಳ ಬಾಡಿಗೆ ದರ ತುಟ್ಟಿಯಾಗಿದೆ. ಇದರಿಂದಾಗಿ ಇತ್ತ ರೈತರ ಜೇಬಿಗೆ ಕತ್ತರಿ ಬೀಳುತ್ತಿದೆ. ಇದರ ಜೊತೆಗೆ ಟ್ರ್ಯಾಕ್ಟರ್ ಮೂಲಕ ಬಾಡಿಗೆ ಆಧಾರಿತ ಕೃಷಿ ಚಟುವಟಿಕೆ ಮಾಡಿಕೊಡುವರಿಗೂ ಅಷ್ಟೊಂದು ಉತ್ತಮ ಆದಾಯವೂ ಬರುತ್ತಿಲ್ಲ. ಡೀಸೆಲ್ ದರ ಹೆಚ್ಚಾಗಿರೋದು ಇದಕ್ಕೆ ಕಾರಣ ಎನ್ನುತ್ತಾರೆ ಟ್ರ್ಯಾಕ್ಟರ್ ಗಳ ಮಾಲೀಕರು.
ಇದರ ಜೊತೆಗೆ ಬೀಜ, ಗೊಬ್ಬರ, ಕೃಷಿ ಕಾರ್ಮಿಕರ ಕೂಲಿಯೂ ಸಹ ಹೆಚ್ಚಾಗಿದೆ. ಆದರೆ ರೈತರ ಉತ್ಪನ್ನಗಳ ದರ ಮಾತ್ರ ಏರಿಕೆಯಾಗುವುದಿಲ್ಲ. ಇದರಿಂದಾಗಿ ರೈತರು ನಷ್ಟ ಅನುಭವಿಸುತ್ತಾರೆ. ಈಗ ಎತ್ತು, ಟ್ರ್ಯಾಕ್ಟರ್ ಇಲ್ಲದ ರೈತರು ಕೃಷಿ ಮಾಡುವುದು ಅಸಾಧ್ಯ ಎಂಬಂತಾಗಿದೆ. ಎಲ್ಲ ಬೆಲೆಗಳು ಏರಿಕೆಯಾಗಿರುವುದರಿಂದ ರೈತರು ತಮ್ಮ ಜಮೀನುಗಳಲ್ಲಿ ಅರ್ಧ ಬಿತ್ತನೆ ಮಾಡುತ್ತಾರೆ. ಇನ್ನುಳಿದ ಜಮೀನನ್ನು ಹಾಗೆ ಹಾಳು ಬಿಡುವಂತಾಗಿದೆ.