ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಕೃಷಿ ಅಭಿಯಾನ ಯೋಜನೆಯಡಿ ಕಾರ್ಯಕ್ರಮ ನಡೆಸದೆ ನಕಲಿ ಬಿಲ್ ತಯಾರಿಸಿ ಕೃಷಿ ಇಲಾಖೆಯ ಅಧಿಕಾರಿ ವೀರೇಶ್ ಕಮತರ ಲಕ್ಷಾಂತರ ರೂ. ಲಪಟಾಯಿಸಿದ್ದಾರೆ ಎಂದು ಕರವೇ ಯುವ ಸೈನ್ಯದ ರಾಜ್ಯಾಧ್ಯಕ್ಷ ರಾಮಣ್ಣ ಉಪ್ಪಾರ ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರವು ರೈತರಿಗೆ ಅನುಕೂಲವಾಗಲಿ ಎಂದು ಅನೇಕ ಕಾರ್ಯಕ್ರಮವನ್ನು ರೂಪಿಸುತ್ತದೆ. ಅದರಂತೆ ಕೃಷಿ ಅಭಿಯಾನ ಯೋಜನೆಯಡಿ ರೈತರಿಗೆ ತಿಳುವಳಿಕೆ ನೀಡುವ ಹಾಗೂ ಪ್ರಾತ್ಯಕ್ಷಿಕೆ ನೀಡುವ ಕಾರ್ಯಕ್ರಮವಿದೆ. ಆದರೆ ಕುಷ್ಟಗಿ ತಾಲೂಕಿನಲ್ಲಿ ಈ ಕಾರ್ಯಕ್ರಮಗಳನ್ನು ನಡೆಸದೆ ಅಲ್ಲಿನ ಕೃಷಿ ಅಧಿಕಾರಿ ವೀರೇಶ್ ಕಮತರ ಅವರು ಲಕ್ಷಾಂತರ ರೂಪಾಯಿ ಲಪಟಾಯಿಸಿದ್ದಾರೆ. ಈ ಕುರಿತಂತೆ ನಕಲಿ ಬಿಲ್ಗಳನ್ನು ತಯಾರಿಸಿದ್ದಾರೆ ಎಂದು ಆರೋಪಿಸಿದರು.
ಇನ್ನು ನಕಲಿ ಬಿಲ್ ಬಳಸಿ ಹಣ ಎತ್ತುವಳಿ ಮಾಡಿರೋದಕ್ಕೆ ಸಂಬಂಧಿಸಿದಂತೆ ವೆಡ್ಸ್ ಮ್ಯಾನ್ ಪವರ್ ಎಜೆನ್ಸಿಯ ಬಿ. ಚಕ್ರಪಾಣಿ ಎಂಬುವರು ಬಾಯ್ಬಿಟ್ಟಿದ್ದಾರೆ. ನಕಲಿ ಬಿಲ್ ತಯಾರಿಸಿ ಎತ್ತುವಳಿ ಮಾಡಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ಕಾರ್ಯಕ್ರಮ ಮಾಡದೆ ಯಾರಿಗೆ ಎಷ್ಟೆಷ್ಟು ಹಣ ಕೊಡಬೇಕು ಎಂಬುದನ್ನು ಅವರು ಹೇಳಿದ್ದು, ಅದನ್ನು ನಾವು ವಿಡಿಯೋ ರೆಕಾರ್ಡ್ ಮಾಡಿದ್ದೇವೆ. ಈ ಕಾರ್ಯಕ್ರಮವಲ್ಲದೆ ಕೃಷಿ ಇಲಾಖೆಯ ಐಡಬ್ಲ್ಯೂಎಂಪಿ- 4 ಕಾರ್ಯಕ್ರಮದಲ್ಲೂ ಭ್ರಷ್ಟಾಚಾರ ನಡೆಸಿದ್ದಾರೆ. ಕೂಡಲೇ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ನಡೆದಿರುವ ಭ್ರಷ್ಟಾಚಾರದ ಬಗ್ಗೆ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ರಾಮಣ್ಣ ಉಪ್ಪಾರ ಹೇಳಿದರು. ಕರವೇ ಯುವ ಸೈನ್ಯದ ರಾಜ್ಯಾಧ್ಯಕ್ಷ ಕೆ.ಎಸ್.ಕೊಡತಗೇರಿ ಸೇರಿದಂತೆ ಮೊದಲಾದವರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.