ಕೊಪ್ಪಳ: ದೇವರ ದರ್ಶನ ಮುಗಿಸಿಕೊಂಡು ಊರಿಗೆ ವಾಪಸ್ ಆಗುತ್ತಿದ್ದ ಟಂಟಂ ವಾಹನಕ್ಕೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ 8 ಜನರು ಗಾಯಗೊಂಡಿದ್ದಾರೆ.
ಜಿಲ್ಲೆಯ ಕುಷ್ಟಗಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಗಾಯಾಳುಗಳು ಕುಷ್ಟಗಿ ತಾಲೂಕಿನ ಕಂದಕೂರು ಗ್ರಾಮದವರಾಗಿದ್ದಾರೆ. ಇವರು ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದುಕೊಂಡು ತಮ್ಮೂರಿಗೆ ವಾಪಸ್ ಆಗುತ್ತಿದ್ದರು.
ಕುಷ್ಟಗಿ ಬಳಿ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಟಂಟಂ ನಲ್ಲಿದ್ದ ಅಂಬಮ್ಮ ಹನಮಂತ ಗೋಪಾಳಿ, ಪರಸಪ್ಪ ಶರಣಪ್ಪ ಓಣಿಮನಿ, ಚನ್ನಪ್ಪ ಗೋಪಾಳಿ, ಮಂಜುನಾಥ ಗೋಪಾಳಿ ಸೇರಿದಂತೆ ಎಂಟು ಜನರಿಗೆ ಗಾಯಗಳಾಗಿವೆ.
ಈ ಪೈಕಿ ಐವರಿಗೆ ತೀವ್ರ ಗಾಯವಾಗಿದ್ದು, ಇನ್ನು ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ತಹಶೀಲ್ದಾರ್ ಕೆ.ಎಂ.ಗುರು ಬಸವರಾಜ ಅವರು, ಗಾಯಾಳುಗಳನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳಿಗೆ ಕುಷ್ಟಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.