ಕೊಪ್ಪಳ: ಕೊರೊನಾದಿಂದ ಮೃತರಾದವರಿಗೆ ಪರಿಹಾರ ನೀಡಲು ಈ ಹಿಂದೆ ಆರ್ಟಿ-ಪಿಸಿಆರ್ ಅಥವಾ ಆ್ಯಂಟಿಜೆನ್ ಟೆಸ್ಟ್ ರಿಪೋರ್ಟ್ ಕಡ್ಡಾಯವಾಗಿತ್ತು. ಆದರೆ ಈಗ ಸರ್ಕಾರ ನಿಯಮವನ್ನು ಪರಿಷ್ಕರಿಸಿದ್ದು, ಕೋವಿಡ್‌ನಿಂದ ಮೃತರಾದ ಬಡ ಕುಟುಂಬಗಳಿಗೆ ಪರಿಹಾರ ನೀಡಲಿದೆ.
ಈಗ ಹೊಸ ತಂತ್ರಾಂಶ ಇ-ಜನ್ಮ ಪೋರ್ಟಲ್‌ನಲ್ಲಿ ದಾಖಲಿಸಿಕೊಂಡು ಸಮೀಕ್ಷೆ ಮಾಡಿ ಅವರಲ್ಲಿ ಬಡ ಕುಟುಂಬಗಳಿಗೆ ಪರಿಹಾರ ನೀಡಲಿದೆ. ಕೊರೊನಾದಿಂದ ಮೃತಪಟ್ಟವರಿಗೆ ಜಿಲ್ಲೆಯಲ್ಲಿ ಈವರೆಗೂ ಪರಿಹಾರ ನೀಡಿಲ್ಲ. ಈ ಬಗ್ಗೆ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಹೇಳಿದ್ದಾರೆ.
ಆರ್ಟಿ-ಪಿಸಿಆರ್ ಅಥವಾ ಆ್ಯಂಟಿಜೆನ್ ಟೆಸ್ಟ್ ಮಾಡಿಸಿಕೊಂಡವರಿಗೆ ಎಸ್ಆರ್ಎಫ್ ನಂಬರ್ ಬರುತ್ತದೆ. ಅಂತಹವರು ಸಾವನ್ನಪ್ಪಿದರೆ ಮಾತ್ರ ಕೊರೊನಾದಿಂದ ಸಾವಾಗಿದೆ ಎಂದು ಪರಿಗಣಿಸಿ ಅಂತಹವರಲ್ಲಿ ಬಡವರಿಗೆ ಪರಿಹಾರ ನೀಡಲು ಸರ್ಕಾರ ಈ ಹಿಂದೆ ಸೂಚಿಸಿತ್ತು.
ಆದರೆ ಸಿಟಿ ಸ್ಕ್ಯಾನ್ ಮಾಡಿಸಿದಾಗ ಕೋವಿಡ್ ಸೋಂಕು ಪತ್ತೆಯಾಗಿ, ಚಿಕಿತ್ಸೆ ನೀಡಿದ ನಂತರವೂ ಗುಣಮುಖರಾಗದೆ ಸಾವನ್ನಪ್ಪಿದವರು ಬಹಳ ಜನ ಇದ್ದಾರೆ. ಸಿಟಿ ಸ್ಕ್ಯಾನ್‌ನಲ್ಲಿ ಕೊರೊನಾ ಸೋಂಕು, ಕೋವಿಡ್ ನಂತರದಲ್ಲಿ ಶ್ವಾಸಕೋಶ ತೊಂದರೆಯಿಂದ ಸಾವನ್ನಪ್ಪಿದರೆ ಅವರ ಸಾವು ಸಹ ಕೋವಿಡ್‌ನಿಂದ ಎಂದು ಪರಿಗಣಿಸಲು ಸರ್ಕಾರ ಈಗ ಸೂಚನೆ ನೀಡಿದೆ.
ಇದನ್ನೂ ಓದಿ: ವಿಧಾನಸಭೆಯಲ್ಲಿ ಇಂದು: ಬೆಲೆ ಏರಿಕೆ ಸಂಕಷ್ಟಕ್ಕೆ ಸಿಲುಕಿದ ಜನರ ಬದಕು ಸರಿಪಡಿಸಿ; ಸರ್ಕಾರಕ್ಕೆ ಹೆಚ್‌ಡಿಕೆ ಆಗ್ರಹ
ಹೀಗಾಗಿ ಜಿಲ್ಲೆಯಲ್ಲಿ ಈಗ ಕೋವಿಡ್ ಸಾವಿನ ಬಗ್ಗೆ ಮರುಸಮೀಕ್ಷೆ ಆರಂಭವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಮೊದಲ ಮತ್ತು ಎರಡನೇ ಅಲೆಯಲ್ಲಿ ಒಟ್ಟು 551 ಜನರು ಸಾವನ್ನಪ್ಪಿದ್ದಾರೆ. ಈ ಮಾಹಿತಿಯು ಐಸಿಎಂಆರ್ ಪೋರ್ಟಲ್‌ನಲ್ಲಿ ದಾಖಲಾಗಿದೆ. ಆದರೆ ಎಸ್ಆರ್ಫ್ ನಂಬರ್ ಇಲ್ಲದ 112 ಜನರು ಸಾವನ್ನಪ್ಪಿರುವುದನ್ನು ಗುರುತಿಸಿದ್ದು, ಇನ್ನೂ ಆಡಿಟ್ ನಡೆಯುತ್ತಿದೆ. ಇ-ಜನ್ಮ ತಂತ್ರಾಂಶದಲ್ಲಿ ದಾಖಲಿಸಿದ ಬಳಿಕ ಅರ್ಹರಿಗೆ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.