ಕೊಪ್ಪಳ: ನಾಲ್ಕು ತಿಂಗಳ ಹಿಂದೆ ನಿರ್ಮಾಣವಾಗಿದ್ದ ತಾಲೂಕಿನ ಬಹದ್ದೂರ ಬಂಡಿ ಗ್ರಾಮದ ರಸ್ತೆ ಕಿತ್ತು ಹೋಗಿದ್ದು, ಅದನ್ನು ಸರಿಯಾಗಿ ನಿರ್ವಹಿಸದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ.
ಬಹದ್ದೂರಬಂಡಿ ನೂತನ ರಸ್ತೆ ಕಿತ್ತುಹೋಗಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಹೆಚ್ಚಿನ ಭಾರ ಹೊತ್ತ ವಾಹನಗಳ ಓಡಾಟದಿಂದ ನೂತನ ರಸ್ತೆಗಳು ಕಿತ್ತುಹೋಗುತ್ತಿವೆ. 3 ವರ್ಷಗಳ ಹಿಂದೆ ಇಲ್ಲಿನ ಕಾಸನಕಂಡಿ ರಸ್ತೆಯನ್ನು ₹ 10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಆ ರಸ್ತೆಯೂ ಕಿತ್ತುಹೋಗಿದೆ. ಬಹದ್ದೂರ ಬಂಡಿ ರಸ್ತೆ ಕಾಮಗಾರಿ ಕಳಪೆ ಆಗಿದ್ದರ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ಒಂದು ವೇಳೆ ಅದು ಕಳಪೆ ಕಾಮಗಾರಿಯಾಗಿದ್ದೆರೆ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಇನ್ನು ಕಾಸನಕಂಡಿ ರಸ್ತೆಯನ್ನು ಸಿಮೆಂಟ್ ರಸ್ತೆಯನ್ನಾಗಿ ಮಾಡುವಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಮನವಿ ಮಾಡಲಾಗಿದೆ ಎಂದು ಶಾಸಕರು ಹೇಳಿದರು. ಬಹದ್ದೂರಬಂಡಿ ನೂತನ ರಸ್ತೆ ಕಿತ್ತುಹೋಗಿದ್ದ ಕುರಿತಂತೆ ಈಟಿವಿ ಭಾರತ ವರದಿ ಪ್ರಕಟಿಸಿತ್ತು.