ಕೊಪ್ಪಳ: ನಮ್ಮ ಕನ್ನಡನಾಡು ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಇಲ್ಲಿನ ಜನ, ಭೂಮಿ, ಶಿಕ್ಷಣ, ವಾತಾವರಣಕ್ಕೆ ಮಾರು ಹೋಗದವರಿಲ್ಲ. ಅದರಲ್ಲೂ ಕೃಷಿಗೆ ಹೆಚ್ಚು ಪ್ರಾಮುಖ್ಯತೆ. ಅದಕ್ಕೊಂದು ಉದಾಹರಣೆ ಇಲ್ಲಿದೆ ನೋಡಿ. ಮಕ್ಕಳ ಆಸೆಯಂತೆ ರಾಜ್ಯದಲ್ಲಿ ಉನ್ನತ ಶಿಕ್ಷಣ ಕೊಡಿಸಿರುವ ಹರಿಯಾಣದ ವ್ಯಕ್ತಿಯೊಬ್ಬ ಕೊಪ್ಪಳ ಜಿಲ್ಲೆಯ ಹವಾಗುಣಕ್ಕೆ ಬೆರಗಾಗಿ ಅಪ್ಪಟ ಕೃಷಿಕರಾಗಿದ್ದಾರೆ.
ಹೀಗೊಂದು ಕೃಷಿಯ ಪ್ರಯಾಣ
ಇವರ ಹೆಸರು ಲಖವೀರ್ ಸಿಂಗ್. ಮೂಲತಃ ಹರಿಯಾಣದವರು. ಇವರ ಮಕ್ಕಳು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆಯಲು ಆಸೆಪಟ್ಟಿದ್ದರು. ಅದರಂತೆ ಆ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಕೊಡಿಸುವ ಸಲುವಾಗಿ ಮಕ್ಕಳ ಜೊತೆಗೆ ಅವರೂ ಇಲ್ಲಿಗೆ ಬಂದಿದ್ದಾರೆ.
ಅಂದುಕೊಂಡಂತೆ ವಿದ್ಯಾಭ್ಯಾಸ ಮುಗಿದ ಬಳಿಕ ಮಕ್ಕಳನ್ನು ಹರಿಯಾಣಕ್ಕೆ ಕಳುಹಿಸಿದ್ದಾರೆ. ಆದರೆ, ಲಖವೀರ್ ಸಿಂಗ್ ಅವರು ಇಲ್ಲಿನ ಹವಾಗುಣ ಮೆಚ್ಚಿ ಕೊಪ್ಪಳದ ಕುಷ್ಟಗಿ ತಾಲೂಕಿನ ನಿಡಶೇಸಿ ಬಳಿ 16 ಎಕರೆ ಭೂಮಿಯನ್ನು ಗುತ್ತಿಗೆ ಪಡೆದು ಐದಾರು ವರ್ಷಗಳಿಂದ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ.
ಈ ಮೊದಲು ಆಂಧ್ರಪ್ರದೇಶದಲ್ಲಿ ಕೆಲಕಾಲ ವಾಸವಾಗಿದ್ದ ಲಖವೀರ್ ಸಿಂಗ್ ಅವರು, ಸೀಡ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಗುತ್ತಿಗೆ ಪಡೆದ ಭೂಮಿಯಲ್ಲಿ 5 ಎಕರೆ ಹೆಬ್ಬೇವು, ಉಳಿದ ಭೂಮಿಯಲ್ಲಿ ಹತ್ತಿ ಸೇರಿ ಹಲವು ಬೆಳೆಗಳನ್ನು ಬೆಳೆದಿದ್ದಾರೆ. ಕೃಷಿಗೆ ಅತ್ಯಂತ ಯೋಗ್ಯ ವಾತಾವರಣ ಇಲ್ಲಿದೆ. ಈ ಭಾಗದಲ್ಲಿ ಕೃಷಿಯಿಂದ ಉತ್ತಮ ಆದಾಯ ಪಡೆಯಬಹುದು. ಇಲ್ಲಿನ ವಾತಾವರಣ ನನ್ನನ್ನು ಆಕರ್ಷಿಸಿದ ಕಾರಣ ಕೃಷಿಯಲ್ಲಿ ತೊಡಗಿರುವೆ ಎನ್ನುತ್ತಾರೆ ಲಖವೀರ್ ಸಿಂಗ್.
ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಲಖವೀರ್ ಸಿಂಗ್ ಅವರೊಂದಿಗೆ ಸ್ಥಳೀಯ ರೈತರು ಬಂದು ಕೃಷಿ ಕುರಿತು ಸಲಹೆಗಳನ್ನು ಪಡೆಯುತ್ತಾರೆ. ನಿತ್ಯ ಸುಮಾರು 20 ಕೂಲಿ ಕಾರ್ಮಿಕರು ತೋಟದಲ್ಲಿ ಕೆಲಸ ಮಾಡುತ್ತಾರೆ. ಒಟ್ಟಿನಲ್ಲಿ ಲಖವೀರ್ ಸಿಂಗ್ ಅವರನ್ನು ನೋಡಿ ಕಲಿಯುವುದು ಬಹಳಷ್ಟಿದೆ ಎಂಬುದು ಈ ಭಾಗದ ರೈತರ ಮಾತು.