ಕೊಪ್ಪಳ: ಕಟ್ಟಡ ಕಾಮಗಾರಿಗೆ ತೆಗೆಯಲಾಗಿದ್ದ ಗುಂಡಿಯಲ್ಲಿ ಕಾಲುಜಾರಿ ಬಿದ್ದು 15 ವರ್ಷದ ಬಾಲಕಿ ಸಾವಿಗೀಡಾದ ಘಟನೆ ಬುಧವಾರ ಕೊಪ್ಪಳದಲ್ಲಿ ಜರುಗಿದೆ. ಶ್ರೀದೇವಿ ಮೃತ ಬಾಲಕಿ.
ಕೊಪ್ಪಳ ನಗರದ ಹೊಸಪೇಟೆ ರಸ್ತೆಯಲ್ಲಿರುವ ಕೆ.ಎಸ್.ಆಸ್ಪತ್ರೆ ಪಕ್ಕದಲ್ಲಿ ಕಟ್ಟಡ ಕಾಮಗಾರಿಗೆಂದು ಅಗೆಯಲಾಗಿದ್ದ ಗುಂಡಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ತುಂಬಿಕೊಂಡಿತ್ತು. ಕೆ.ಎಸ್.ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಗೆ ಊಟ ಕೊಡಲು ಮಂಗಳವಾರ ಬಂದಿದ್ದ 15 ವರ್ಷದ ಬಾಲಕಿ ಶ್ರೀದೇವಿ ಕಾಲು ಜಾರಿ ಗುಂಡಿಗೆ ಬಿದ್ದಿದ್ದಾಳೆ. ಮೊನ್ನೆ ಸಂಜೆಯಿಂದ ಕಾಣೆಯಾದ ಮಗಳಿಗಾಗಿ ಪೋಷಕರು ಹುಡುಕಾಡಿದ್ದಾರೆ.
ನಂತರ ಬಾಲಕಿಯ ಪೋಷಕರು ಮಂಗಳವಾರ ರಾತ್ರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ನೀಡಿದ್ದರು. ಬಳಿಕ ಆಸ್ಪತ್ರೆಯಲ್ಲಿನ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ, ಶ್ರೀದೇವಿ ನೀರು ತುಂಬಿದ ಗುಂಡಿಗೆ ಬಿದ್ದಿರುವುದು ಗೋಚರಿಸಿದೆ. ಬಾಲಕಿಯ ಪಾಲಕರ ಆಕ್ರಂದನ ಮುಗಿಲು ಮುಟ್ಟಿದ್ದು, ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಇದನ್ನೂ ಓದಿ: ಮೇಯರ್ ಸ್ಥಾನ ಕೊಡಿಸುವುದಾಗಿ ಕೋಟಿ, ಕೋಟಿ ಹಣ ಪಡೆದು ವಂಚನೆ: ದೂರು ದಾಖಲು