ಗಂಗಾವತಿ: ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದರಿಂದ ಶ್ರೀ ಕೃಷ್ಣದೇವರಾಯನ ಮಂಟಪ ಜಲಾವೃತವಾಗಿದೆ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ಸಮೀಪದಲ್ಲಿ ತುಂಗಭದ್ರಾ ತಟದಲ್ಲಿರುವ ಐತಿಹಾಸಿಕ 64 ಕಾಲಿನ ಮಂಟಪವನ್ನು ಶ್ರೀ ಕೃಷ್ಣದೇವರಾಯನ ಸಮಾಧಿ ಎಂದು ಕರೆಯಲಾಗುತ್ತದೆ. ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದರಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗಿದೆ. ಪರಿಣಾಮ ಕೃಷ್ಣದೇವರಾಯನ ಸಮಾಧಿ ಜಲಾವೃತವಾಗಿದ್ದು, ಮಂಟಪದ ಮೇಲ್ಭಾಗ ಮಾತ್ರ ಸ್ವಲ್ಪ ಕಾಣಿಸುತ್ತಿದೆ.
64 ಲಲಿತ ಕಲೆಗಳಲ್ಲಿ ಪರಿಣಿತನಾಗಿದ್ದ ಶ್ರೀ ಕೃಷ್ಣದೇವರಾಯ ಯುದ್ಧದಲ್ಲಿ ವೀರಮರಣವನ್ನಪ್ಪಿದ ಬಳಿಕ ಆತನನ್ನು ಇಲ್ಲಿಯೇ ಸಮಾಧಿ ಮಾಡಲಾಗಿದೆ ಎಂಬುದು ಸ್ಥಳೀಯರ ನಂಬಿಕೆ. ಪ್ರತಿ ಬಾರಿ ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾದಾಗೆಲ್ಲಾ, ನದಿಗೆ ನೀರು ಹರಿಸಿದಾಗೆಲ್ಲಾ ಕೃಷ್ಣದೇವರಾಯನ ಸ್ಮಾರಕ ಜಲ ಸಮಾಧಿಯಾಗುತ್ತದೆ.