ಕೊಪ್ಪಳ : ಜಿಲ್ಲಾಡಳಿತ ಕಳುಹಿಸಿದ್ದ 123 ಸ್ಯಾಂಪಲ್‌ಗಳಲ್ಲಿ 41 ಜನರ ವರದಿ ನೆಗೆಟಿವ್ ಬಂದಿದ್ದು, ಕೊಪ್ಪಳದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಈ ಕುರಿತು ಮಾತನಾಡಿ, ಕಳೆದೆರಡು ದಿನಗಳಲ್ಲಿ 123 ಜನರ ರಕ್ತದ ಮಾದರಿ, ಗಂಟಲು ದ್ರವ ತಪಾಸಣೆಗೆ ಕಳುಹಿಸಲಾಗಿತ್ತು. ಈ ಮೊದಲು ಓರ್ವ ವ್ಯಕ್ತಿಯ ವರದಿ ನೆಗೆಟಿವ್ ಬಂದಿತ್ತು. 123 ಜನರ ಪೈಕಿ 41 ಜನರ ವರದಿ ನೆಗೆಟಿವ್ ಬಂದಿದ್ದು, ಇನ್ನುಳಿದ 82 ಜನರ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ ಎಂದು ತಿಳಿಸಿದರು.
ಜಿಲ್ಲಾಡಳಿತ ಇದೇ ಮೊದಲ ಬಾರಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಾದರಿಗಳನ್ನು ತಪಾಸಣೆಗೆ ಕಳುಹಿಸಿದೆ. ಅಂತರ್ ಜಿಲ್ಲೆ, ಸೇರಿದಂತೆ ಪಕ್ಕದ ರಾಜ್ಯಗಳಿಗೆ ದುಡಿಯಲು ಹೋಗಿದ್ದ ಜನರ ರಕ್ತದ ಮಾದರಿ ಹಾಗೂ ಗಂಟಲು ದ್ರವದ ಸ್ಯಾಂಪಲ್ ಅನ್ನು ಲ್ಯಾಬ್‌ಗೆ ಕಳುಹಿಸಲಾಗಿತ್ತು. ಇನ್ನುಳಿದ 82 ಜನರ ವರದಿ ಇಂದು ರಾತ್ರಿ ವೇಳೆಗೆ ಜಿಲ್ಲಾಡಳಿತದ ಕೈ ಸೇರುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಮಾಹಿತಿ ನೀಡಿದ್ದಾರೆ.