ಗಂಗಾವತಿ:ಕನಕಗಿರಿ ತಾಲೂಕಿನಲ್ಲಿ ಒಣ ಬೇಸಾಯದ ಮಂಗಾರು ಮಳೆಯ ಪೂರ್ವದಲ್ಲಿ ರೈತರು ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆ ನಾಟಿ ಮಾಡಿದ್ದು, ಆದರೆ ಕಳಪೆ ಗುಣಮಟ್ಟದ ಬೀಜದಿಂದಾಗಿ ಹತ್ತಿ ಬೆಳೆ ನಾಶವಾಗುವ ಆತಂಕ ಎದುರಾಗಿದೆ.
ಕಳಪೆ ಬಿತ್ತನೆ ಬೀಜ ತಂದ ಆಪತ್ತು: ತಾಲೂಕಿನ ಚಿಕ್ಕಖೇಡಾ, ಹಿರೇಖ್ಯಾಡಾ, ಗುಡದೂರು, ಬಸರಿಹಾಳ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ರೈತರು ದೊಡ್ಡ ಪ್ರಮಾಣದಲ್ಲಿ ಹತ್ತಿ ಬೀಜ ಬಿತ್ತಿದ್ದಾರೆ. ಒಂದು ಕಡೆ ಕಳಪೆ ಬಿತ್ತನೆ ಬೀಜ ಮತ್ತೊಂದು ಕಡೆ ಮಳೆಯ ಕೊರತೆಯಿಂದಾಗಿ ಹತ್ತಿ ಬೆಳೆ ಸಂಪೂರ್ಣ ನಾಶವಾಗುವ ಆತಂಕ ಎದುರಾಗಿದೆ. ಹತ್ತಿ ಬೆಳೆಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಹಾನಿಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೃಷಿ ಇಲಾಖೆಯ ಮಾಹಿತಿ ಪ್ರಕಾರ ಕನಕಗಿರಿ ತಾಲೂಕಿನಲ್ಲಿ ಒಟ್ಟು 400 ಹೆಕ್ಟೇರ್ ಪ್ರದೇಶದಲ್ಲಿ ರೈತರು ಹತ್ತಿ ಬೆಳೆಯನ್ನು ಬಿತ್ತನೆ ಮಾಡಿದ್ದಾರೆ. ಈ ಪೈಕಿ ಬಹುತೇಕ ಬೆಳೆ ಹಾನಿಯಾಗುವ ಲಕ್ಷಣಗಳು ಕಾಣಿಸಿದ್ದು ರೈತರಲ್ಲಿ ಆತಂಕ ಶುರುವಾಗಿದೆ.
ಇದನ್ನೂಓದಿ:Electricity bill: ಹಂಪಿ ಕನ್ನಡ ವಿವಿಗೆ ಮೂರು ತಿಂಗಳ ಕರೆಂಟ್ ಶಾಕ್.. ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಒತ್ತಾಯ
ವಿಜ್ಞಾನಿಗಳು ಭೇಟಿ: ರೈತರ ದೂರಿನ ಹಿನ್ನೆಲೆ ಸ್ಥಳಕ್ಕೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ, ಸಹಾಯಕ ನಿರ್ದೇಶಕ ಸಂತೋಷ್ ಪಟ್ಟದಕಲ್ ನೇತೃತ್ವದಲ್ಲಿ ರಾಯಚೂರು ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿಗಳು ಕನಕಗಿರಿ ತಾಲೂಕಿನ ರೈತರ ಹೊಲಗದ್ದೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹತ್ತಿ ಬಿತ್ತಲು ಆಯ್ಕೆ ಮಾಡಿಕೊಂಡ ಬಿತ್ತನೆ ಬೀಜದ ನಮೂನೆ, ರಸಗೊಬ್ಬರ ಬಳಕೆ, ನೀರಿನ ವ್ಯವಸ್ಥೆ ಲಭ್ಯತೆ ಕುರಿತಾದ ಮಾಹಿತಿಯನ್ನು ಅಧಿಕಾರಿಗಳು ಹಾಗೂ ವಿಜ್ಞಾನಿಗಳ ತಂಡ ರೈತರಿಂದ ಮಾಹಿತಿ ಕಲೆ ಹಾಕಿದರು. ಬಳಿಕ ರೈತರ ಮಾಹಿತಿ ಮೇರೆಗೆ ಕನಕಗಿರಿ, ಗಂಗಾವತಿಯಲ್ಲಿ ಖರೀದಿಸಿದ ಹತ್ತಿ ಬೀಜದ ಮಾಹಿತಿ ಆಧರಿಸಿ ಅಂಗಡಿಗಳಿಗೆ ಭೇಟಿ ನೀಡಿದ ತಂಡ, ಮಾದರಿ ಬೀಜಗಳನ್ನು ಸಂಗ್ರಹಿಸಿ ಸಂಶೋಧನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಮುಂಗಾರು ವಿಫಲ ತೇವಾಂಶ ಕೊರತೆ: ರೈತರು ಮುಂಗಾರು ಪ್ರವೇಶದ ಮುನ್ನವೇ ಹತ್ತಿ ಬೀಜ ನಾಟಿ ಮಾಡಿದ್ದಾರೆ. ವಾತಾವರಣದಲ್ಲಿ ತೇವಾಂಶ ಕೊರತೆ ಪರಿಣಾಮ ಹತ್ತಿ ಬೆಳೆಯ ಮೇಲೆ ಉಂಟಾಗಿರುವ ಸಾಧ್ಯತೆ ಇದೆ. ಪ್ರಯೋಗಾಲಯದಿಂದ ವರದಿ ಬಂದ ಬಳಿಕ ಖಚಿತ ಮಾಹಿತಿ ಸಿಗಲಿದೆ. ಇದಕ್ಕೆ ಸಂಬಂಧಿಸಿದಂತೆ ವಿಸ್ತೃತ ವರದಿಯನ್ನು ನಾಲ್ಕು ದಿನಗಳಲ್ಲಿ ನಿರ್ದೇಶಕರಿಗೆ ಸಲ್ಲಿಸಲಾಗುವುದು ಎಂದು ವಿಜ್ಞಾನಿಗಳ ತಂಡ ತಿಳಿಸಿದೆ.
ತಂಡದಲ್ಲಿ ಕೃಷಿ ವಿವಿಯ ಸಂಶೋಧನಾ ತಂಡದ ಮುಖ್ಯಸ್ಥ ಎಂ.ಜೆ. ನಿಡಗುಂದಿ, ಬೇಸಾಯ ಪ್ರಾಧ್ಯಾಪಕ ಎಂ.ವೈ. ಅಜಯ ಕುಮಾರ, ಸಸ್ಯರೋಗ ಪ್ರಾಧ್ಯಾಪಕ ಎಸ್.ಬಿ. ಗೌಡರ್, ಕೀಟಶಾಸ್ತ್ರದ ಪ್ರಾಧ್ಯಾಪಕ ಎಸ್.ಜಿ. ಹಂಚಿನಾಳ, ಕೃಷಿ ಇಲಾಖೆಯ ನಾಗರಾಜ್, ನವೀನ್ ಇದ್ದರು.