ಕೋಲಾರ : ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ಕೋಲಾರ ಸಂಸದ ಎಸ್. ಮುನಿಸ್ವಾಮಿ ಸೈಕಲ್ ಟು ಫ್ರೀಡಂ ಅಭಿಯಾನ ಆಯೋಜಿಸಿದ್ದರು. ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಹಿನ್ನೆಲೆ 75 ಕಿ.ಮೀ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಇತರ ಸೈಕ್ಲಿಸ್ಟ್‌ಗಳೊಂದಿಗೆ ಸಂಸದ ತೇಜಸ್ವಿ ಸೂರ್ಯ ಮತ್ತು ಕೋಲಾರ ಸಂಸದ ಮುನಿಸ್ವಾಮಿ ಸೈಕಲ್ ರ್‍ಯಾಲಿಯಲ್ಲಿ ಭಾಗವಹಿಸಿದ್ದರು.
ಬೆಳಿಗ್ಗೆ 7 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ನಂತರ ನಗರದ 450ಕ್ಕೂ ಅಧಿಕ ಉತ್ಸಾಹಿ ಸೈಕ್ಲಿಸ್ಟ್‌ಗಳು ಸೈಕಲ್ ರ್‍ಯಾಲಿಯಲ್ಲಿ ಭಾಗವಹಿಸಿದರು. ಬೆಂಗಳೂರು, ಕೆ.ಆರ್.ಪುರಂ, ಹೊಸಕೋಟೆ ಮಾರ್ಗವಾಗಿ ಕೋಲಾರಕ್ಕೆ ಸೈಕಲ್ ಜಾಥಾ ಬಂದಿದೆ.
ವಿಧಾನಸೌಧದಿಂದ ಹೊರಟಿದ್ದ ಸೈಕಲ್ ಟು ಫ್ರೀಡಂ ಜಾಥಾ 9 ಗಂಟೆ ಸುಮಾರಿಗೆ ಕೋಲಾರದ ಗಡಿ ರಾಮಸಂದ್ರ ತಲುಪಿತ್ತು. ಇಲ್ಲಿ ಕೋಲಾರ ಸಂಸದ ಎಸ್. ಮುನಿಸ್ವಾಮಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಸೈಕಲ್ ಜಾಥಾಗೆ ಹೂವಿನ ಸುರಿಮಳೆ ಗೈದು, ಅದ್ಧೂರಿ ಸ್ವಾಗತ ಕೋರಿದರು. ಬೆಳಗ್ಗೆ11.30ರ ಸುಮಾರಿಗೆ ಕೋಲಾರ ನಗರದ ಜೂನಿಯರ್ ಕಾಲೇಜು ಮೈದಾನಕ್ಕೆ ಸೈಕಲ್ ಜಾಥಾ ಬಂದು ತಲುಪಿತು. ಜಾಥಾದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಕಾಲೇಜು ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಸೈಕಲ್ ರ್‍ಯಾಲಿ ಮಾಡೋದ್ರಿಂದ ಆರೋಗ್ಯ ಸುಧಾರಿಸುತ್ತದೆ. ಜೊತೆಗೆ ಯುವಕರಿಗೆ ವ್ಯಾಯಾಮ ಆಗುತ್ತದೆ. ಅಲ್ಲದೇ ನಮ್ಮ ಸಂಘಟನೆ ಸ್ವಲ್ಪ ಗಟ್ಟಿಯಾಗುತ್ತದೆ. ಈ ಮೂರು ಆಗಬೇಕು ಮತ್ತು ಮಾಡಬೇಕು ಎಂಬ ಉದ್ದೇಶ ಜೆಡಿಎಸ್ಗಾಗಲಿ ಅದರ ನಾಯಕರಿಗೆ ಇಲ್ಲ. ಕರ್ನಾಟಕದಲ್ಲಿ ಜೆಡಿಎಸ್ ಕೊನೆ ಹಂತದಲ್ಲಿ ಇದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಭಾರತದ ತ್ರಿವರ್ಣ ಧ್ವಜ ಹೊತ್ತು ರ್‍ಯಾಲಿ ಮಾಡೋದ್ರಿಂದ ಸಮಾಜದ ಕೋಮು ಸೌಹಾರ್ದತೆಗೆ ಧಕ್ಕೆಯಾಗುತ್ತದೆ ಎಂದು ಪ್ರಬುದ್ಧ ನಾಯಕರು ಹೇಳುತ್ತಾರೆ. ಅಂದರೆ ಅವರ ಚಿಂತನೆ ಯಾವ ರೀತಿ ಇರಬಹುದು, ಅವರ ಪಾರ್ಟಿ ಯಾವುದನ್ನು ಬೆಂಬಲಿಸಬಹುದು. ಅವರ ಪಾರ್ಟಿ ಯಾವ ಸಿದ್ಧಾಂತವನ್ನು ಪಾಲಿಸುತ್ತಿರಬಹುದು ಎಂದುನ್ನು ಜನರು ಯೋಚನೆ ಮಾಡಬೇಕು. ಅಲ್ಲದೇ ಇದನ್ನೆಲ್ಲಾ ಮಾಡೋದಕ್ಕೆ ಕಾಂಗ್ರೆಸ್ ಅಥವಾ ಜೆಡಿಎಸ್ನಿಂದ ಸಾಧ್ಯವಿಲ್ಲ. ನಾವು ನಮ್ಮ ತ್ರಿವರ್ಣ ಧ್ವಜದ ಪರವಾಗಿದ್ದೇವೆ, ಅವರು ಯಾವ ಧ್ವಜದ ಪರವಾಗಿದ್ದಾರೆ ಅನ್ನೋದನ್ನು ತಿಳಿಸಬೇಕು. ಅಲ್ಲದೇ ಇವರಿಗೆ ಮುಂದಿನ ದಿನದಲ್ಲಿ ಜನರೇ ಪಾಠ ಕಲಿಸ್ತಾರೆ ಎಂದರು.