ಕೋಲಾರ: ದಕ್ಷಿಣ ಕಾಶಿ ಎಂದು ಕರೆಯಿಸಿಕೊಳ್ಳುವ ಅಂತರಗಂಗೆಯಲ್ಲಿ ಕೋತಿಗಳ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಲುಷಿತ ನೀರು ಸೇವಿಸಿದ ಪರಿಣಾಮ ಸಾವನ್ನಪ್ಪಿವೆ ಎಂದು ಪ್ರಯೋಗಾಲಯದ ವರದಿಯಿಂದ ತಿಳಿದು ಬಂದಿದೆ.
ಅಂತರಗಂಗೆ ಬೆಟ್ಟದಲ್ಲಿ ಸಾವಿರಾರು ಕೋತಿಗಳು ವಾಸವಾಗಿದ್ದು, ಇತ್ತೀಚೆಗ 20 ಕ್ಕೂ ಹೆಚ್ಚು ಕೋತಿಗಳು ಸಾವನ್ನಪ್ಪಿದ್ದವು. ಅಲ್ಲದೆ ಹತ್ತಾರು ಕೋತಿಗಳು ಅಸ್ವಸ್ಥವಾಗಿ ನಿತ್ರಾಣ ಸ್ಥಿತಿಯನ್ನ ತಲುಪಿದ್ದವು. ಈ ಹಿನ್ನಲೆ ಅಂತರಗಂಗೆ ಸುತ್ತಮುತ್ತ ಮಂಗನ ಕಾಯಿಲೆ ಭೀತಿ ಹರಡಿತ್ತು. ಹೀಗಾಗಿ ಅರಣ್ಯ ಇಲಾಖೆಯವರು, ಪಶು ವೈದ್ಯರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಮೃತ ಕೋತಿಗಳ ಮರಣೋತ್ತರ ಪರೀಕ್ಷೆ ನಡೆಸಿ ಕೆಲವು ಮಾದರಿಗಳನ್ನ ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು.
ಸದ್ಯ ಕಲುಷಿತ ನೀರಿನ ಸೇವನೆಯಿಂದ ಕೋತಿಗಳು ಸಾವನ್ನಪ್ಪಿದ್ದವು ಎಂದು ಪ್ರಯೋಗಾಲಯದ ವರದಿ ತಿಳಿಸಿದೆ. ಸ್ಥಳೀಯರು ಮಂಗನ ಕಾಯಿಲೆ ಆತಂಕದಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೆ ಅಂತರಗಂಗೆಯಲ್ಲಿ ಸ್ವಚ್ಛತೆ ಕೈಗೊಳ್ಳಲಾಗಿದೆ. ಈಗಾಗಲೇ ನಿತ್ರಾಣ ಸ್ಥಿತಿ ತಲುಪಿದ್ದ ಕೋತಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಅವು ಚೇತರಿಸಿಕೊಂಡಿವೆ ಎಂದು ಕೋಲಾರ ಜಿಲ್ಲಾ ಪಶುಸಂಗೋಪನಾಧಿಕಾರಿ ಮಧುಸೂಧನ್ ರೆಡ್ಡಿ ಮಾಹಿತಿ ನೀಡಿದ್ದಾರೆ.