ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದಲ್ಲಿ ದಿನಕ್ಕೊಂದು ತಿರುವು ಎದುರಾಗುತ್ತಿದೆ. ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಪೊಲೀಸರು ಎಲ್ಲಾ ಆಯಾಮಗಳ ತನಿಖೆಯಲ್ಲಿ ತೊಡಗಿದ್ದಾರೆ.
ಹಣಕಾಸಿನ ವಿಚಾರ, ಮಹಿಳೆ ವಿಚಾರ ಸೇರಿದಂತೆ ಹನಿ ಟ್ರ್ಯಾಪ್ ಆಯಾಮಗಳು ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಕಿಡ್ನಾಪ್ ಹಿಂದೆ ಕೆಲಸ ಮಾಡಿರಬಹುದು ಎನ್ನಲಾಗುತ್ತಿತ್ತು. ಇದೀಗ ಪೊಲೀಸ್ ಮೂಲಗಳ ಪ್ರಕಾರ, ವರ್ತೂರು ಅಪಹರಣಕ್ಕೆ ಮುಂದಾದವರು ಮುಖಕ್ಕೆ ಮಂಕಿ ಕ್ಯಾಪ್ ಧರಿಸಿದ್ದರು ಎನ್ನಲಾಗ್ತಿದೆ. ಈ ಹಿನ್ನೆಲೆಯಲ್ಲಿ ವರ್ತೂರು ಅವರಿಗೆ ಗುರುತು ಇರುವವರೇ ಈ ರೀತಿಯ ಕೃತ್ಯ ಎಸಗಿರಬಹುದಾದ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಆಪ್ತರೇ ಕಿಡ್ನಾಪ್ ಮಾಡಿದ್ರಾ?
ವರ್ತೂರು ಪ್ರಕಾಶ್ ಅವರ ಫಾರ್ಮ್ ಹೌಸ್ನಲ್ಲಿ ಕೆಲಸ ಮಾಡುತ್ತಿದ್ದವರು ಆಂಧ್ರ ಪ್ರದೇಶ ಹಾಗೂ ಹೊರ ರಾಜ್ಯದ ಯುವಕರಾಗಿದ್ದರು. ಆದರೆ ಸರಿಯಾಗಿ ಸಂಬಳ ನೀಡಿಲ್ಲ ಎಂದು ಕೆಲಸ ಬಿಟ್ಟು ವಾಪಸ್ ತೆರಳಿದ್ದರು. ಹೀಗಾಗಿ ಮಾಜಿ ಸಚಿವರ ಫಾರ್ಮ್ಹೌಸ್ನಲ್ಲಿ ಕೆಲಸಕ್ಕಿದ್ದವರು ಗುಂಪು ಕಟ್ಟಿಕೊಂಡು ಈ ಕೃತ್ಯ ಎಸಗಿರಬಹುದೇ? ಎಂಬ ಶಂಕೆಯೂ ಇದೆ.
ಕಿಡ್ನಾಪ್ ಮಾಡಿದವರು ಕನ್ನಡ ಮತ್ತು ತಮಿಳು ಭಾಷೆ ಮಾತನಾಡುತ್ತಿದ್ದರು ಎನ್ನಲಾಗಿತ್ತು. ವರ್ತೂರು ವಿಚಾರಣೆ ವೇಳೆ ಅವರು ಸ್ಪಷ್ಟವಾಗಿ ತೆಲುಗು ಮಾತನಾಡುತ್ತಿದ್ದರು, ಜೊತೆಗೆ ಇಲ್ಲಿ ನಡೆಯುತ್ತಿದ್ದ ವಿಷಯವನ್ನು ತೆಲುಗು ಭಾಷೆಯಲ್ಲಿ ಯಾರಿಗೋ ಮಾಹಿತಿ ಕೊಡುತ್ತಿದ್ದರು ಎನ್ನುವುದನ್ನು ಪೊಲೀಸರ ಬಳಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫಾರ್ಮ್ಹೌಸ್ನಲ್ಲಿ ಕೆಲಸ ಮಾಡಿದ್ದ ಜನರು ಅವರ ಸಂಪೂರ್ಣ ಚಲನವಲನಗಳು ತಿಳಿದವರೇ, ಪ್ಲಾನ್ ಮಾಡಿಕೊಂಡು ಅವರನ್ನು ಕಿಡ್ನಾಪ್ ಮಾಡಿ ಇಂಥ ಕೆಲಸ ಮಾಡಿರುವ ಸಾಧ್ಯತೆಯ ಬಗ್ಗೆ ಸಂಶಯವೆದ್ದಿದೆ.
ಇದೀಗ ಪೊಲೀಸರು ಹೊಸ ಆಯಾಮಗಳಿಂದ ತನಿಖೆ ಶುರು ಮಾಡಿದ್ದು, ಫಾರ್ಮ್ಹೌಸ್ನಲ್ಲಿ ಕೆಲಸ ಮಾಡುತ್ತಿದ್ದ ಕೆಲ ಕೆಲಸಗಾರರನ್ನು ಪ್ರಶ್ನಿಸಲಿದ್ದೇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಓದಿ: ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣಕ್ಕೆ ಟ್ವಿಸ್ಟ್: ಅಪಹರಣ ಮಾಡಿದ್ದು ಯಾರು ಗೊತ್ತಾ!?