ಕೋಲಾರ: ಕೊರೊನಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡ ನಿರ್ಧಾರಗಳನ್ನು ನೋಡಿ ವಿರೋಧ ಪಕ್ಷದವರು ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ವೇಳೆ ಅನೇಕ ಮೆಡಿಕಲ್ ಕಾಲೇಜುಗಳನ್ನು ಮೋದಿ ಅವರು ಪ್ರಾರಂಭ ಮಾಡಿದ್ದರು. ಲ್ಯಾಬ್ಗಳಿಗೆ ಹೆಚ್ಚಿನ ಆದ್ಯತೆ ನೀಡಿ, ಈ ದಿನ 100 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಿದ್ದಾರೆ. ಇದನ್ನ ವಿರೋಧ ಪಕ್ಷದವರು ಸಹಿಸುತ್ತಿಲ್ಲ. ವಿರೋಧ ಪಕ್ಷದವರು ಅವರ ಬೆನ್ನನ್ನ ಅವರು ನೋಡಿಕೊಂಡರೆ ಸತ್ಯದ ಅರಿವಾಗುತ್ತದೆ. ಇಡೀ ದೇಶ ಮೋದಿ ಅವರನ್ನ ಕೊಂಡಾಡುತ್ತಿದೆ. ಬೇರೆ ದೇಶಗಳು ಭಾರತದ ಲಸಿಕೆಯನ್ನು ಕೇಳುತ್ತಿವೆ ಎಂದರು.
ಲಸಿಕೆ ಕುರಿತು ಸಿದ್ದರಾಮಯ್ಯ ಟ್ವೀಟ್ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದು, ಅವರಿಗೆ ಎಲ್ಲಾ ಅಧಿಕಾರಿಗಳ ಒಡನಾಟ ಇರುತ್ತದೆ. ಹೀಗಾಗಿ ಅಧಿಕಾರಿಗಳಿಂದ ಈ ಕುರಿತು ಸಂಪೂರ್ಣ ಮಾಹಿತಿ ಪಡೆದು ಮಾತನಾಡಲಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಕಾಂಗ್ರೆಸ್ ಸೇರ್ಪಡೆಗೆ ಸಿದ್ಧ: ಅಶೋಕ್ ಪೂಜಾರಿ