ಕೋಲಾರ: ವಸತಿ ಶಾಲೆಯ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಿರುವ ಅಮಾನವೀಯ ಘಟನೆಯೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮಾಲೂರು ತಾಲೂಕಿನಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಹಿರಿಯ ಶಿಕ್ಷಕರ ಸಮ್ಮುಖದಲ್ಲೇ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದರಿಂದ ಮಕ್ಕಳಿಗೆ ಮೈ- ಕೈ, ಬೆನ್ನು ನೋವು ಸೇರಿದಂತೆ ಹುಷಾರಿಲ್ಲದೆ ಬಳಲುತ್ತಿದ್ದಾರೆ ಎನ್ನಲಾಗ್ತಿದೆ. ಇನ್ನು ವಸತಿ ಶಾಲೆಯ ಹಿರಿಯ ಶಿಕ್ಷಕರು ಮತ್ತು ಸಿಬ್ಬಂದಿ ತಮ್ಮನ್ನು ಮಲದ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಿದ್ದಾರೆ. ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ತಿಳಿಸಿದ್ದಾರೆ. ಅಲ್ಲದೆ, ಈ ಕುರಿತ ವಿಡಿಯೋಗಳು ವೈರಲ್ ಆಗಿವೆ.
ಪೋಷಕರ ಬಳಿ ಮಕ್ಕಳ ಅಳಲು: ಈ ಘಟನೆ ಬಗ್ಗೆ ಮಕ್ಕಳೇ ತಮ್ಮ ಪೋಷಕರ ಎದುರು ಅಳಲನ್ನು ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬೆಳಗಾವಿ: ಸಿಲಿಂಡರ್ ಸ್ಫೋಟ; 9 ತಿಂಗಳ ಮಗು ಸೇರಿ ಒಂದೇ ಕುಟುಂಬದ 7 ಜನರಿಗೆ ಗಂಭೀರ ಗಾಯ
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಂದ ಪರಿಶೀಲನೆ: ವಸತಿ ಶಾಲೆಯಲ್ಲಿ ಸುಮಾರು 250ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಘಟನೆಯಿಂದಾಗಿ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತಮ್ಮ ಮಕ್ಕಳಿಗೆ ಕಿರುಕುಳ ನೀಡಿರುವಂತಹ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಪೋಷಕರು ಒತ್ತಾಯ ಮಾಡಿದ್ದಾರೆ. ಸದ್ಯ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಮುಂದುವರಿದಿದೆ ಎಂಬ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ಕುಕ್ಕೆಯಲ್ಲಿ ಚಂಪಾಷಷ್ಠಿ ಮಹೋತ್ಸವ: ಭಕ್ತರಿಂದ ಎಡೆಸ್ನಾನ ಸೇವೆ, ಇಂದು ಪಂಚಮಿ ರಥೋತ್ಸವ