ಕೋಲಾರ: ತಾಲೂಕಿನ ಹೊಳಲಿ ಗ್ರಾಮದಲ್ಲಿ ಸ್ವಾಮೀಜಿಯೊಬ್ಬ 20 ವರ್ಷದ ಯುವತಿಯೊಂದಿಗೆ ನಾಪತ್ತೆಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ದತ್ತಾತ್ರೇಯ ಅವಧೂತ ಸ್ವಾಮೀಜಿ ಯುವತಿಯೊಂದಿಗೆ ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ಯುವತಿಯ ಸೋದರ ಮಾವ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದಾರೆ.
ಜನವರಿ 15ರಂದು ಹೊಳಲಿ ಗ್ರಾಮದ ಭೀಮಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ಬಂದಿದ್ದ ಸ್ವಾಮೀಜಿ, ''ನಾನು ಇಲ್ಲಿಯೇ ಇದ್ದು, ದೇವಾಲಯದ ಅಭಿವೃದ್ಧಿ ಜೊತೆಗೆ ಸೇವಾಶ್ರಮ ಮಾಡಿ ಪೀಠಾಧಿಪತಿಯಾಗಿ ಅಭಿವೃದ್ಧಿ ಪಡಿಸುತ್ತೇನೆ'' ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ದನಂತೆ. ಗ್ರಾಮಸ್ಥರೂ ಕೂಡ ಈತನ ಮಾತಿಗೆ ಒಪ್ಪಿಗೆ ಸೂಚಿಸಿ ದೇವಾಲಯ ಅಭಿವೃದ್ಧಿಗೆ ಮುಂದಾಗಿದ್ದಾರೆ. ಅದರಂತೆ ಸಿಎಂ ಯಡಿಯೂರಪ್ಪ ಸೇರಿದಂತೆ ಉಪ ಮುಖ್ಯಮಂತ್ರಿ, ಸಚಿವರು ಸೇರಿದಂತೆ ಗಣ್ಯರಿಗೆ ಆಹ್ವಾನ ನೀಡಿ ಅದ್ಧೂರಿಯಾಗಿ ಜಾತ್ರೆ ಮಾಡಲಾಗಿತ್ತು. ಇದಕ್ಕಾಗಿ ಗ್ರಾಮದ ಕೆಲವರ ಬಳಿ ಲಕ್ಷಾಂತರ ರೂಪಾಯಿಯನ್ನು ಪಡೆದು ರಾತ್ರೋರಾತ್ರಿ ಪರಾರಿಯಾಗಿದ್ದಾನೆ ಎಂಬ ಆರೋಪ ಕೇಳಿ ಬರುತ್ತಿದೆ.
ಅದ್ಧೂರಿ ಜಾತ್ರೆಗೆ ಬಳಸಿದ್ದ ಸೌಂಡ್ ಸಿಸ್ಟಮ್, ಫ್ಲೆಕ್ಸ್, ಬ್ಯಾನರ್ನವರಿಗೂ ಇನ್ನೂ ಹಣ ನೀಡಿಲ್ಲ. ಗ್ರಾಮದ ಕೆಲವರ ಬಳಿ ಲಕ್ಷಾಂತರ ರೂಪಾಯಿ ಹಣ ಕೂಡ ಪಡೆದಿರುವ ಸ್ವಾಮೀಜಿ, ರಾತ್ರೋರಾತ್ರಿ ಯುವತಿಯೊಂದಿಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ವಿಶೇಷ ಅಂದ್ರೆ ಯುವತಿ ತನ್ನ ಆಧಾರ್ ಕಾರ್ಡ್, ಮಾರ್ಕ್ಸ್ ಕಾರ್ಡ್ಗಳು, ರೇಷನ್ ಕಾರ್ಡ್ ತೆಗೆದುಕೊಂಡು ಹೋಗಿದ್ದಾಳೆ ಎನ್ನಲಾಗುತ್ತಿದೆ. ಇನ್ನು ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಯುವತಿ ಸ್ವಾಮೀಜಿಯೊಂದಿಗೆ ಮದುವೆಯಾಗಿದ್ದು, ತಿರುಪತಿಯಲ್ಲಿದ್ದಾರೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.