ಕೋಲಾರ: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆಮಾಡಿತ್ತು. ಆ ಐದು ಯೋಜನೆಗಳು ಹೆಚ್ಚಾಗಿ ಮತದಾರರನ್ನು ಆಕರ್ಷಿಸಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಪೂರ್ಣ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದ್ದು, ಯೋಜನೆಗಳನ್ನು ಹೇಗೆ ಕೊಡೋದು ಎಂಬ ಬಗ್ಗೆ ಚರ್ಚೆ ನಡೆಸುತ್ತಿರುವುದರ ಮಧ್ಯೆಯೇ ಜನರು ಸರ್ಕಾರ ಕೊಡುವ ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಹೌದು.. ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ನೀಡಿದ್ದ ಗೃಹಲಕ್ಷ್ಮೀ, ಭಾಗ್ಯಲಕ್ಷ್ಮೀ, ಅನ್ನಭಾಗ್ಯ, ಯುವನಿಧಿ, ಮಹಿಳೆಯರಿಗೆ ಉಚಿತ ಬಸ್, ಈ ಎಲ್ಲ ಯೋಜನೆಗಳು ಜನರನ್ನು ಆಕರ್ಷಿಸಿದ್ದವು. ಕಾಂಗ್ರೇಸ್ ಪಕ್ಷ ಅಭೂತ ಪೂರ್ವ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿರುವ ಹಿನ್ನೆಲೆಯಲ್ಲಿ, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ತಾವು ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಹೇಗೆ ಕೊಡೋದು ಅನ್ನೋದರ ಬಗ್ಗೆ ತಲೆ ಕೆಡಿಸಿಕೊಂಡು ಯೋಜನೆಗಳನ್ನು ಜಾರಿಗೆ ತರಲು ಬೇಕಾದ ರೂಪು ರೇಷೆಗಳನ್ನು ಸಿದ್ದಪಡಿಸುತ್ತಿದ್ದರೆ, ಇತ್ತ ಜನರು ಯೋಜನೆಗಳನ್ನು ಪಡೆಯಲು ಬೇಕಾದ ಅಗತ್ಯ ದಾಖಲಾತಿಗಳನ್ನ ಸಿದ್ದಪಡಿಸಿಕೊಳ್ಳುತ್ತಿದ್ದಾರೆ.
ಜನರ ಈ ದಾವಂತವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಸೈಬರ್ ಸೆಂಟರ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿಗಳನ್ನು ಹಬ್ಬಿಸಿ, ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಪಡಿತರ ಕಾರ್ಡ್ಗೆ ಆಧಾರ್ ಲಿಂಕ್ ಮಾಡಬೇಕು ಎಂದು ವದಂತಿ ಹಬ್ಬಿಸಿವೆ. ಅದಕ್ಕೆ 250 ರೂಪಾಯಿ ಖರ್ಚಾಗುತ್ತದೆ ಎಂದು ವದಂತಿ ಹಬ್ಬಿಸಿ ಕಳೆದ ಎರಡು ದಿನಗಳಿಂದ ಸೈಬರ್ ಸೆಂಟರ್ನವರು ಜನರಿಂದ ಹಣ ವಸೂಲಿ ನಡೆಸಿದ್ದಾರೆ. ಸರ್ಕಾರದ ಉಚಿತ ಯೋಜನೆಗಳನ್ನು ಪಡೆಯಲು ಜನರೂ ಕೂಡಾ ದಾಖಲಾತಿಗಳನ್ನು ಪಡೆಯಲು ಸೈಬರ್ ಸೆಂಟರ್ಗಳ ಮುಂದೆ ಕ್ಯೂನಿಂತು ದಾಖಲಾತಿಗಳನ್ನು ಪಡೆಯಲು ಪರದಾಡುತ್ತಿದ್ದಾರೆ.
ಇನ್ನು ಈ ವಿಚಾರ ನಗರದೆಲ್ಲೆಡೆ ಹಬ್ಬಿತ್ತು. ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ವೆಂಕಟರಾಜಾ ಅವರ ಸೂಚನೆ ಮೇರೆಗೆ ಕೆಜಿಎಫ್ ತಹಶೀಲ್ದಾರ್ ಶ್ರೀನಿವಾಸ್ ಹಾಗೂ ರಾಬರ್ಟ್ಸನ್ ಪೇಟೆ ಇನ್ಸ್ಪೆಕ್ಟರ್ ಕುಮಾರಸ್ವಾಮಿ ನೇತೃತ್ವದಲ್ಲಿ ತಂಡ ಕೆಜಿಎಫ್ ನಗರದ ಹಲವು ಬ್ರೌಸಿಂಗ್ ಸೆಂಟರ್ಗಳು ಹಾಗೂ ಕಾಮನ್ ಸರ್ವಿಸ್ ಸೆಂಟರ್ಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಕೆಜಿಎಫ್ ನಗರದ ಸುಮಾರು 6 ಬ್ರೌಸಿಂಗ್ ಸೆಂಟರ್ಗಳಲ್ಲಿ ಜನರಿಂದ 250 ರೂಪಾಯಿ ಹಣ ಪಡೆದು, ದಾಖಲಾತಿ ಮಾಡಿಕೊಡುವುದಾಗಿ ಹೇಳಿ ಹಣ ಸುಲಿಗೆ ಮಾಡುತ್ತಿದ್ದ ವಿಚಾರ ತಿಳಿದು ಬಂದಿದೆ. ಹಿನ್ನೆಲೆಯಲ್ಲಿ 6 ಬ್ರೌಸಿಂಗ್ ಸೆಂಟರ್ಗಳ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಜೊತೆಗೆ ಜನರು ಈರೀತಿ ವದಂತಿಗಳಿಗೆ ಕಿವಿಗೊಡದಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ವೆಂಕಟರಾಜಾ ಅವರು ಮಾತನಾಡಿ, ಕೆಲವು ಸೈಬರ್ ಸೆಂಟರ್ ಮತ್ತು ಕೆಫೆಗಳಲ್ಲಿ ಕೆಲವು ವದಂತಿಗಳನ್ನು ಹಬ್ಬಿಸಲಾಗಿದ್ದು, 5 ಯೋಜನೆಗಳನ್ನು ಪಡೆಯಲು ಆಧಾರ್ಕಾರ್ಡ್ ನೊಂದಿಗೆ ವಿವಿಧ ದಾಖಲೆಗಳನ್ನು ಜೋಡಿಸಬೇಕು ಎಂದು ಸುಳ್ಳನ್ನು ಹೇಳಿದ್ದಾರೆ. ಈ ರೀತಿ ಆಧಾರ್ನೊಂದಿಗೆ ದಾಖಲೆಗನ್ನು ಜೋಡಣೆ ಮಾಡಬೇಕೆಂಬ ಬಗ್ಗೆ ಯಾವುದೇ ಮಾರ್ಗಸೂಚಿಗಳು ಬಂದಿಲ್ಲ. ಬಂದಿದ್ದರೆ ಅದನ್ನು ಸರ್ಕಾರವೇ ಉಚಿತವಾಗಿ ಮಾಡಿಕೊಡಲಿದೆ. ಈ ರೀತಿ ವದಂತಿ ಹಬ್ಬಿಸಿದವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಅಧಿಕಾರಿಗಳ ಕರ್ತವ್ಯ ಲೋಪ ಸಹಿಸಲ್ಲ, ಜನರ ಕೆಲಸಕ್ಕೆ ಲಂಚ ಕೇಳಿದ್ರೇ ಸುಮ್ಮನಿರಲ್ಲ: ಶಾಸಕ ಶಿವಗಂಗಾ ಬಸವರಾಜ್ ತಾಕೀತು