ಕೋಲಾರ: ಜಿಲ್ಲೆಯಲ್ಲಿ ಮತ್ತೆ ಮೀಟರ್ ಬಡ್ಡಿ ದಂಧೆ ಹಾವಳಿ ಮುಂದುವರೆದಿದ್ದು, ಮೀಟರ್ ಬಡ್ಡಿ ದಂಧೆಕೋರರು ಯುವಕನೊಬ್ಬನನ್ನು ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ವೈರಲ್ ಆಗಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಬನಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಬಡ್ಡಿ ಹಣ ನೀಡದ ಕಾರಣ ಯುವಕನನ್ನ ರಸ್ತೆಯಲ್ಲಿಯೇ ಎಳೆದಾಡಿ ಹೊಡೆದಿದ್ದಾರೆ. ಇನ್ನು ಬನಹಳ್ಳಿ ಗ್ರಾಮದ ಜಗದೀಶ್ ಎಂಬ ಯುವಕನ ಮೇಲೆ ಅದೇ ಗ್ರಾಮದ ಮೀಟರ್ ಬಡ್ಡಿ ದಂಧೆಕೋರರಾದ ಮಧು, ಮೀಸೆ ನಾರಾಯಣಪ್ಪ, ಮುನಿರಾಜಮ್ಮ ಹಾಗೂ ಮಂಜುನಾಥ್ ಎಂಬುವರು ಹಲ್ಲೆ ನಡೆಸಿದ್ದಾರೆ. ಜಗದೀಶ್ ಎಂಬಾತ ಇದೇ ಗ್ರಾಮದ ಮುನಿರಾಜಮ್ಮ ಎಂಬುವರ ಬಳಿ ಕಳೆದ ಎರಡು ತಿಂಗಳ ಹಿಂದೆ ಇಪತ್ತು ಸಾವಿರ ಹಣವನ್ನ ಪಡೆದಿದ್ದು, ಎರಡು ತಿಂಗಳಿನಿಂದ ಬಡ್ಡಿ ಕಟ್ಟದ ಹಿನ್ನೆಲೆ ಬಡ್ಡಿ ಹಾಗೂ ಅಸಲು ಸೇರಿ 70 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ಬಡ್ಡಿ ಹಾಗೂ ಅಸಲು ಹಣ ನೀಡಲು ನಾಲ್ಕು ತಿಂಗಳು ಕಾಲ ಕಾಲಾವಕಾಶ ಕೇಳಿದ್ದು, ಇದನ್ನ ನಿರಾಕರಿಸಿದ ಅವರು, ಯುವಕನನ್ನ ರಸ್ತೆಯಲ್ಲಿ ಎಳೆದಾಡಿ ಹಲ್ಲೆ ನಡೆಸಿದ್ದಾರೆ.
ಅಲ್ಲದೇ ಹಲ್ಲೆ ನಡೆಸುವುದನ್ನು ತಡೆಯಲು ಬಂದ ಜಗದೀಶ್‍ನ ಅಣ್ಣ ಸುನೀಲ್, ಹಾಗೂ ಹರೀಶ್ ಎಂಬುವರ ಮೇಲೆಯೂ ಹಲ್ಲೆ ನಡೆಸಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.