ಕೋಲಾರ: ಉತ್ತರ ಕರ್ನಾಟಕದ 17 ಜಿಲ್ಲೆಗಳ ಜನರು ಪ್ರವಾಹದಿಂದ ತತ್ತರಿಸಿದ್ದು, ಅವರಿಗೆ ನೆರವು ನೀಡುವ ಉದ್ದೇಶದಿಂದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್) ಸಿಬ್ಬಂದಿ ತಮ್ಮ ಒಂದು ದಿನದ ಸಂಬಳವನ್ನು ನೀಡಿದ್ದಾರೆ.
ಹಾಲು ಒಕ್ಕೂಟದ ಎಲ್ಲಾ ಸಿಬ್ಬಂದಿ ಒಂದು ದಿನದ ವೇತನ 6,33,000 ರೂ. ಹಣ ನೀಡುವ ಜತೆಗೆ 4.15 ಲಕ್ಷ ರೂ. ಮೌಲ್ಯದ 8 ಸಾವಿರ ಲೀಟರ್ ಟೆಟ್ರಾ ಹಾಲಿನ ಪ್ಯಾಕೆಟ್ಗಳನ್ನು ಬೆಳಗಾವಿ ಜಿಲ್ಲೆಗೆ ಕಳುಹಿಸಿದರು. ಈ ವೇಳೆ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಮಾಲೂರು ಶಾಸಕ ಕೆ ವೈ ನಂಜೇಗೌಡ ಅವರು ಜಿಲ್ಲಾಧಿಕಾರಿ ಕೆ ಮಂಜುನಾಥ್ ಅವರಿಗೆ ನೆರವಿನ ಚೆಕ್ ಹಸ್ತಾಂತರಿಸಿದರು.
ಇದೇ ವೇಳೆ ಮಾತನಾಡಿದ ಕೋಚಿಮುಲ್ ಅಧ್ಯಕ್ಷ ನಂಜೇಗೌಡ, ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕದ ಜನರ ಕಷ್ಟಗಳಿಗೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ರಾಜ್ಯದಲ್ಲಿರುವ ಸಂಕಷ್ಟಕ್ಕೆ ಇದೆಲ್ಲಾ ಬಹಳ ಕಡಿಮೆಯಾಗಿದೆ. ಪ್ರತಿಯೊಬ್ಬರು ತಮ್ಮ ಕೈಲಾದಷ್ಟು ಸಹಾಯ ಹಸ್ತವನ್ನು ನೀಡಬೇಕು ಎಂದು ಕೇಳಿಕೊಂಡರು.