ಕೋಲಾರ: ಬಿ.ಎಲ್.ಸಂತೋಷ್ ಅವರು ಬಿಜೆಪಿ ಜೊತೆ ಸೇರಿಕೊಂಡು ಬ್ರಾಹ್ಮಣರ ಓಲೈಕೆಗೆ ಮಣೆ ಹಾಕುತ್ತಿದ್ದಾರೆ ಎಂಬ ಜಗದೀಶ್ ಶೆಟ್ಟರ್ ಆರೋಪಕ್ಕೆ, ಓಲೈಕೆ ಎಂಬುದು ಬಿಜೆಪಿಯವರಿಗೆ ಗೊತ್ತಿಲ್ಲ ಎಂದು ಕೋಲಾರದಲ್ಲಿ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಕೋಲಾರದ ಬಿಜೆಪಿ ಅಭ್ಯರ್ಥಿ ವರ್ತೂರ್ ಪ್ರಕಾಶ್ ಅವರಿಗೆ ನಾಮಪತ್ರ ಸಲ್ಲಿಸಲು ಸಾಥ್ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮದು ಆಂತರಿಕ ಪ್ರಜಾಪ್ರಭುತ್ವ ಇರುವಂತಹ ಪಕ್ಷ. ಕಾಂಗ್ರೆಸ್ ರೀತಿ ಒಂದು ಕುಟುಂಬದ ಪಕ್ಷ ಅಲ್ಲ ಎಂದರು. ಅಲ್ಲದೇ ಪಾರ್ಲಿಮೆಂಟರಿ ಬೋರ್ಡ್, ನಾಯಕರುಗಳು ಸೇರಿದಂತೆ ಪ್ರಧಾನಿಗಳಿರುತ್ತಾರೆ. ಇವರೊಂದಿಗೆ 18 ಜನರಿದ್ದು, ಅವರ ಮುಂದೆ ಪ್ರತಿಯೊಂದು ಕ್ಷೇತ್ರದ ಬಗ್ಗೆ ತೀರ್ಮಾನವಾಗಿ, ಆ ನಂತರ ಅಭ್ಯರ್ಥಿ ಆಯ್ಕೆಯಾಗುವುದು ಎಂದು ಹೇಳಿದರು.
ವೈಯಕ್ತಿಕವಾಗಿ ಬಿ.ಎಲ್.ಸಂತೋಷ್ ಜೀ ಅವರು ವಿರುದ್ಧದ ಆಪಾದನೆ ಸತ್ಯಕ್ಕೆ ದೂರವಾದದ್ದು. ಅವರು ಚಿಲ್ಲರೆ ರಾಜಕಾರಣ ಮಾಡುವಂತಹ ಸ್ವಭಾವದವರಲ್ಲ. ಸಂಘಟನೆಗಾಗಿ ಅವರನ್ನೇ ಸಮರ್ಪಣೆ ಮಾಡಿಕೊಂಡಿರುವ ಧೀಮಂತ ವ್ಯಕ್ತಿ. ಶೆಟ್ಟರ್ ಹೇಳಿಕೆಯನ್ನು ಖಂಡಿಸುತ್ತೇನೆ ಎಂದರು.
ಯಾವ ಸಮುದಾಯಕ್ಕೆ ಪಕ್ಷ ಅನುಕೂಲ ಮಾಡಿ ಕೊಡುತ್ತದೋ ಅಂತಹ ಸರ್ಕಾರವನ್ನು ಜನ ಬಯಸ್ತಾರೆಯೇ ಹೊರತು, ಯಾರೋ ಒಬ್ಬರಿಗೆ ಲಾಭ ನಷ್ಟವನ್ನು ಬಯಸುವುದಿಲ್ಲ ಎಂದು ಲಿಂಗಾಯತ ಮತಗಳ ಓಲೈಕೆ ಕುರಿತು ಮಾತನಾಡಿದ ಶೆಟ್ಟರ್‌ಗೆ ತಿರುಗೇಟು ನೀಡಿದರು. ಇನ್ನು ಶೆಟ್ಟರ್ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ. ಹಾಗಿದ್ದರೆ ಸಿದ್ದರಾಮಯ್ಯ ಅವರು ಶೆಟ್ಟರ್‌ಗೆ ಸಿಎಂ ಸ್ಥಾನ ಬಿಟ್ಟುಕೊಡೋದಾಗಿ ಹೇಳಿಸಲಿ ನೋಡೋಣ ಎಂದರು.
ಇದನ್ನೂ ಓದಿ : 3ನೇ ಪಟ್ಟಿಯಲ್ಲಿ 3 ಕುಟುಂಬಕ್ಕೆ ಬಿಜೆಪಿ ಟಿಕೆಟ್: ಶೆಟ್ಟರ್ ಜಾಗಕ್ಕೆ ಟೆಂಗಿನಕಾಯಿಗೆ ಛಾನ್ಸ್