ಕೋಲಾರ : ಕಾಡುಪ್ರಾಣಿಗಳ ಬೇಟೆಗೆ ತೆರಳಿದ್ದ ವೇಳೆ ವ್ಯಕ್ತಿಗೆ ಗುಂಡೇಟು ತಗುಲಿ ಮೃತಪಟ್ಟಿದ್ದಾರೆ. ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಶ್ರೀನಿವಾಸಪುರ ತಾಲೂಕಿನ ಸೀಗೇಹಳ್ಳಿ ಗ್ರಾಮದ ಬಳಿ ಇರುವ ಮಾವಿನ ತೋಪಿನಲ್ಲಿ ಈ ಘಟನೆ ಜರುಗಿದೆ. ಶಂಕರಪ್ಪ (55) ಎಂಬಾತ ಮೃತದುರ್ದೈವಿಯಾಗಿದ್ದಾರೆ.
ಪರವಾನಿಗೆ ಹೊಂದಿದ್ದ ಬಂದೂಕಿನಲ್ಲಿ ಕಾಡು ಪ್ರಾಣಿಗಳನ್ನ ಬೇಟೆಯಾಡಲು, ಗ್ರಾಮದ ಕೋದಂಡಪ್ಪ, ಚೌಡಪ್ಪ, ಶ್ರೀನಿವಾಸಗೌಡ ಎಂಬುವರ ಜತೆಗೆ ಮೃತ ಶಂಕರಪ್ಪ ತೆರಳಿದ್ದರು. ಈ ವೇಳೆ ಶಂಕರಪ್ಪನ ಹಣೆಗೆ ಬಂದೂಕಿನ ಗುಂಡು ತಗುಲಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಸಂಬಂಧ ಬೇಟೆಗೆ ಹೋಗಿದ್ದ ಮೂವರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ:ರಿವಾಲ್ವರ್ನಲ್ಲಿ ಆಟವಾಡುತ್ತಾ ತನ್ನ ಹಿಂಭಾಗಕ್ಕೆ ಫೈರ್ ಮಾಡಿಕೊಂಡ ಬಾಲಕ!
ಬೇಟೆಯಾಡುವ ವೇಳೆ ಜೊತೆಯಲ್ಲಿದ್ದವರು ಶಂಕರಪ್ಪನ ಹಣೆಗೆ ಗುರಿಯಿಟ್ಟು ಗುಂಡು ಹೊಡೆದು ಕೊಲೆ ಮಾಡಿದ್ದಾರೆಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಬೇಟೆಗೆ ಹೋದಾಗ ಮಿಸ್ ಫೈರ್ ಆಗಿ ಗುಂಡು ಹಣೆಗೆ ತಗುಲಿ ಸಾವನ್ನಪ್ಪಿರಬಹುದು ಎನ್ನಲಾಗಿದೆ. ಮೂವರನ್ನ ವಶಕ್ಕೆ ಪಡೆದಿರುವ ಶ್ರೀನಿವಾಸಪುರ ಠಾಣಾ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ಸತ್ಯಾಂಶ ಹೊರ ಬೀಳಲಿದೆ.