ಕೋಲಾರ: ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಮಾರುಕಟ್ಟೆ ಎಂದೇ ಹೆಸರಾಗಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಅಳವಡಿಸಲಾಗಿರುವ ಸೋಂಕು ನಿವಾರಕ ಸುರಂಗವನ್ನ ಕೋಲಾರ ಸಂಸದ ಎಸ್ ಮುನಿಸ್ವಾಮಿ ಅವರು ಉದ್ಘಾಟಿಸಿದರು.
ಕೊರೊನಾ ಸೋಂಕು ತಡೆ ನಿಟ್ಟಿನಲ್ಲಿ ಕೋಲಾರದ ಹೊರವಲಯದಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ಸ್ಯಾನಿಟೈಸರ್ ಸಿಂಪಡಿಸುವ ದ್ವಾರವನ್ನ ಅಳವಡಿಸಲಾಗಿದೆ. ತಮಿಳುನಾಡು ಸೇರಿದಂತೆ ಇನ್ನಿತರ ಭಾಗಗಳಲ್ಲಿ ಮಾರುಕಟ್ಟೆಗಳ ಪ್ರವೇಶ ದ್ವಾರದಲ್ಲಿ ಸೋಂಕು ನಿವಾರಕ ಸುರಂಗವನ್ನ ಅಳವಡಿಸಲಾಗಿದೆ. ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ.
ಪ್ರತಿನಿತ್ಯ ಮಾರುಕಟ್ಟೆಯಲ್ಲಿ ಗ್ರಾಹಕರು, ವರ್ತಕರು, ಮಾಲೀಕರು ಸೇರಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಮಾರುಕಟ್ಟೆ ಪ್ರವೇಶ ಮಾಡ್ತಾರೆ. ಮುಂಜಾಗ್ರತಾ ಕ್ರಮವಾಗಿ ಸೋಂಕು ನಿವಾರಕ ಸುರಂಗ ಅಳವಡಿಸಲಾಗಿದೆ. ಮಾರುಕಟ್ಟೆ ಪ್ರವೇಶಿಸುವ ಪ್ರತಿಯೊಬ್ಬರೂ ಸುರಂಗದಲ್ಲಿ ಪ್ರವೇಶ ಮಾಡುವುದರೊಂದಿಗೆ ಮಾರುಕಟ್ಟೆಯನ್ನ ವೈರಸ್ ಮುಕ್ತವಾಗಿ ಮಾಡಬೇಕೆಂದು ಸಂಸದರು ತಿಳಿಸಿದ್ರು.
ಇದೇ ವೇಳೆ ಎಪಿಎಂಸಿ ಮಾರುಕಟ್ಟೆ ಸಮಿತಿ ವತಿಯಿಂದ ಸಿಎಂ ತುರ್ತು ಪರಿಸ್ಥಿತಿಯ ಪರಿಹಾರ ನಿಧಿಗೆ ₹50 ಲಕ್ಷದ ಚೆಕ್ನ ಸಂಸದರ ಮೂಲಕ ನೀಡಲಾಯಿತು. ಅಲ್ಲದೆ ಮಾರುಕಟ್ಟೆ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ನಗರಸಭೆ ಸದಸ್ಯರನ್ನೊಳಗೊಂಡಂತೆ ಸಭೆ ನಡೆಸಿ, ನೀರಿನ ಸಮಸ್ಯೆ ಕುರಿತು ಚರ್ಚೆ ನಡೆಸಿದ್ರು.