ಕೋಲಾರ : ಜಿಲ್ಲೆಯನ್ನು ಕೆರೆಗಳ ನಾಡು ಎಂದು ಕೆರೆಯಲಾಗುತ್ತದೆ. ಕಾರಣ ಕೋಲಾರದಲ್ಲಿ ಸರಿ ಸುಮಾರು 2,500ಕ್ಕೂ ಹೆಚ್ಚು ಕೆರೆಗಳಿವೆ. ಇಲ್ಲಿನ ಕೆರೆಗಳನ್ನು ಅಭಿವೃದ್ದಿಪಡಿಸಿ ಕೆರೆಗಳಲ್ಲಿ ನೀರು ನಿಂತರೆ ಜಿಲ್ಲೆಯ ನೀರಿನ ಸಮಸ್ಯೆ ಬಗೆಹರಿಯುತ್ತದೆ ಅನ್ನೋದನ್ನು ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅರಿತಿದ್ದಾರೆ.
ಹೀಗಾಗಿ, ಅವರು ಅಮೃತ ಸರೋವರ ಎಂಬ ಯೋಜನೆಯಡಿ ಕೋಲಾರ ಜಿಲ್ಲೆಯ 75 ಕೆರೆಗಳಲ್ಲಿ ಹೂಳು ತೆಗೆದು, ಅದಕ್ಕೆ ಬೇಕಾದ ಪೋಷಕ ಕಾಲುವೆಗಳ ಒತ್ತುವರಿ ತೆರವು ಮಾಡಲು ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲ, ಅದಕ್ಕಾಗಿ ತಮ್ಮ ವೈಯಕ್ತಿಕ ಸಂಸದರ ಅನುದಾನದಿಂದ 1.80 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದಾರೆ.
ಕೇವಲ ಅನುದಾನ ಬಿಡುಗಡೆ ಮಾಡಿ ಸುಮ್ಮನಿರದ ಹಣಕಾಸು ಸಚಿವೆ, 75 ಕೆರೆಗಳನ್ನು ಅಭಿವೃದ್ದಿ ಪಡಿಸಲು ಅಧಿಕಾರಿಗಳಿಗೆ ಟಾರ್ಗೆಟ್ ಸಹ ಕೊಟ್ಟಿದ್ದಾರೆ. ಎರಡು ತಿಂಗಳಲ್ಲಿ 75 ಕೆರೆಗಳ ಹೂಳು ತೆಗೆಯಬೇಕು. ಅಗತ್ಯ ಬಿದ್ದರೆ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲೂ ಕೆರೆಗಳನ್ನು ಅಭಿವೃದ್ದಿಪಡಿಸುವಂತೆ ತಿಳಿಸಿದ್ದಾರೆ.
ಮುಂದಿನ ತಿಂಗಳು ಜಿಲ್ಲೆಗೆ ತಾವು ಖುದ್ದು ಭೇಟಿ ನೀಡಿ, ಕೆರೆ ಅಭಿವೃದ್ದಿ ಕಾಮಗಾರಿಗಳನ್ನು ಪರಿಶೀಲನೆ ನಡೆಸುವುದಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರ ಮೊದಲ ಭಾಗವಾಗಿ ಈಗಾಗಲೇ ಕೇಂದ್ರದಿಂದ ಅಧಿಕಾರಿಗಳ ತಂಡ ಜಿಲ್ಲೆಗೆ ಭೇಟಿ ನೀಡಿ, ಪ್ರಗತಿಯಲ್ಲಿರುವ ಅಮೃತ ಸರೋವರ ಯೋಜನೆಯ ಕಾಮಗಾರಿಯ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಮಳಲಿ ದೇಗುಲ ಶೈಲಿ ಪತ್ತೆ ವಿಚಾರ: ನಾಳೆ ತಾಂಬೂಲ ಪ್ರಶ್ನೆ, ಕಾನೂನು ಅಂಶದ ಮನವರಿಕೆ ಮಾಡಿದ ಜಿಲ್ಲಾಡಳಿತ
ಇನ್ನು ಜಿಲ್ಲೆಯ ಅಧಿಕಾರಿಗಳು ಹಣಕಾಸು ಸಚಿವರ ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ, ಆ ಹಣವನ್ನು ಕೆಲವು ಆಯ್ದ ಕೆರೆಗಳ ಶುದ್ಧೀಕರಣ ಮಾಡಲು ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಅದರ ಕೆಲಸ ಕೂಡ ಆರಂಭಿಸಲಾಗಿದೆ.