ಕೋಲಾರ: ಬಾಂಗ್ಲಾ ಮತ್ತು ಅಫ್ಘಾನಿಸ್ತಾನದ ಅಲ್ಪಸಂಖ್ಯಾತರಿಗೆ ಆಶ್ರಯ ಕೊಡುವುದು ಗಾಂಧಿ ಕನಸಾಗಿತ್ತು. ಅದರಂತೆ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಸುಮಾರು 3 ಕೋಟಿ ಜನರಿಗೆ ಪೌರತ್ವ ನೀಡಿ ಸವಲತ್ತು ಒದಗಿಸುವುದು ಕಾಯ್ದೆಯ ಉದ್ದೇಶವಾಗಿದೆ. ಆದರೆ, ಕಾಂಗ್ರೆಸ್ ಸುಳ್ಳು ಸುದ್ದಿಯನ್ನ ಹಬ್ಬಿಸಿ ರಾಷ್ಟ್ರ ವಿರೋಧ ನೀತಿಯನ್ನ ಅನುಸರಿಸುತ್ತಿದೆ ಎಂದರು. ಕಾಂಗ್ರೆಸ್ ಕಾಯ್ದೆ ಕುರಿತು ಅಪಪ್ರಚಾರ ಮಾಡಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಆದರೆ, ಬಿಜೆಪಿ ಪೌರತ್ವ ಇಲ್ಲದವರಿಗೆ ಪೌರತ್ವ ಕೊಟ್ಟು ಜನ ಜಾಗೃತಿ ಮೂಡಿಸುವಂತಹ ಕೆಲಸ ಮಾಡುತ್ತಿದೆ ಎಂದರು.
ಇನ್ನು ಇಟಲಿಯಿಂದ ಬಂದ ಸೋನಿಯಾ ಗಾಂಧಿಯವರಿಗೆ ಪೌರತ್ವ ಸಿಕ್ಕಿರುವಾಗ ಆ ಮೂರು ದೇಶಗಳ ಅಲ್ಪಸಂಖ್ಯಾತರಿಗೆ ಬೇಡವೇ ಎಂದು ಪ್ರಶ್ನಿಸಿದರು. ಅಲ್ಲದೆ ಬುದ್ಧಿಜೀವಿಗಳು, ವಿಚಾರವಾದಿಗಳು ವಿರೋಧ ಮಾಡುವ ಮೂಲಕ ಅರ್ಬನ್ ನಕ್ಸಲರಂತಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ಹಿಂದೆ ಮಾಡಲು ಹೊರಟಿದ್ದ ಕಾಯ್ದೆಯನ್ನೇ ನಾವು ಮಾಡುತ್ತಿರುವುದು. ಹಾಗಾದ್ರೆ, ಅವರೆಲ್ಲಾ ಸಂವಿಧಾನ ವಿರೋಧಿಗಳೇ ಎಂದು ಪ್ರಶ್ನಿಸಿದ ಅವರು, ಯಾರು ಎಷ್ಟೇ ಕೂಗಾಡಿದರೂ ಮೋದಿ ಅವರ ವರ್ಚಸ್ಸು ಕುಗ್ಗಿಸಲು ಸಾಧ್ಯವಿಲ್ಲ ಎಂದರು.