ಕೋಲಾರ: ಐಎಂಎ ಸಂಸ್ಥೆ ವಂಚನೆಯ ಜಾಲ ಕೋಲಾರಕ್ಕೂ ಹರಡಿದೆ ಎಂದು ತಿಳಿದು ಬಂದಿದೆ. ನೂರಾರು ಅಮಾಯಕ ಜನರು ಕೋಟ್ಯಂತರ ರೂಪಾಯಿ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಅತಿ ಹೆಚ್ಚು ಜನ ಐಎಂಎ ಜ್ಯೂವೆಲರಿಯಲ್ಲಿ ಹೂಡಿಕೆ ಮಾಡಿದ್ದಾರಂತೆ. ಕೊಂಡಶೆಟ್ಟಿಹಳ್ಳಿ, ಸೀತನಾಯಕನಹಳ್ಳಿ, ಮಾಸ್ತಿ, ಟೇಕಲ್, ಮಾಲೂರು ಪಟ್ಟಣ ಸೇರಿದಂತೆ ಹತ್ತಾರು ಗ್ರಾಮಗಳ ನೂರಾರು ಜನರು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದಾರೆ ಎನ್ನಲಾಗಿದೆ.
ಜನರ ಮಾಹಿತಿ ಪ್ರಕಾರ, ಕೊಂಡಶೆಟ್ಟಿಹಳ್ಳಿಯಿಂದ ಸುಮಾರು 4-5 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಇಲ್ಲಿನ ಕೆಲವರು ಸೌದಿಯಲ್ಲಿ ನೆಲೆಸಿದ್ದು, ಅವರೂ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದಾರೆ. ಇನ್ನು ಮಾಸ್ತಿ ಗ್ರಾಮದಲ್ಲಿ 7 ಕೋಟಿ ರೂ., ಸೀತನಾಕನಹಳ್ಳಿಯಲ್ಲಿ 5 ಕೋಟಿ ರೂ., ಕೋಲಾರ ನಗರದಲ್ಲಿ ಹತ್ತು ಕೋಟಿ ರೂ. ಹೂಡಿಕೆ ಮಾಡಿ, ಇದೀಗ ಜನರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಹಣ ಕಳೆದುಕೊಂಡವರಲ್ಲಿ ಕಡು ಬಡವರೇ ಹೆಚ್ಚಿಗಿದ್ದಾರೆ. ಟೀ ಅಂಗಡಿ, ಪಂಚರ್ ಅಂಗಡಿಯವರು, ಒಡವೆ ಮಾರಿ, ಜಮೀನು ಮಾರಿ ಮದುವೆಗೆಂದು ಕೂಡಿಟ್ಟಿದ್ದ ಹಣವನ್ನು ಹೂಡಿಕೆ ಮಾಡಿದ್ದರು. ಇನ್ನು ಮುಸ್ಲಿಂ ಜನಾಂಗದವರು ಹೆಚ್ಚಿರುವ ಜಾಗಗಳಲ್ಲಂತೂ ಪ್ರತಿ ಹಳ್ಳಿಯವರು ಎರಡ್ಮೂರು ಕೋಟಿ ರೂ. ಹೂಡಿಕೆ ಮಾಡಿದ್ದಾರಂತೆ. ಹತ್ತಾರು ಹಳ್ಳಿಯ ಜನರು ಸುಮಾರು 25 ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಿ ಇದೀಗ ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ವಂಚನೆಗೊಳಗಾದ ಕೆಲವರು ಈಗಾಗಲೇ ಬೆಂಗಳೂರಿನಲ್ಲೇ ದೂರು ನೀಡಿದ್ದಾರೆ.
ಇನ್ನು ಐಎಂಎ ಮಾಲೀಕ ಮನ್ಸೂರ್, ಕೆಲವು ವರ್ಷಗಳ ಹಿಂದೆ ಮಾಲೂರು ಪಟ್ಟಣದಲ್ಲಿ ಶಾದಿ ಮಹಲ್ ನಿರ್ಮಾಣ ಮಾಡಿಕೊಡುವುದಾಗಿ ಹೇಳಿದ್ದರಂತೆ. ನಾಲ್ಕು ಕೋಟಿ ವೆಚ್ಚದಲ್ಲಿ ಶಾದಿ ಮಹಲ್ ನಿರ್ಮಾಣ ಕಾರ್ಯಕ್ಕೂ ಕೈಹಾಕಿದ್ದು ತಿಳಿದುಬಂದಿದೆ.