ಕೋಲಾರ: ಪ್ರೀತಿಸಿ ಮದುವೆ ಮಾಡಿಕೊಂಡಿದ್ದ ಪತಿಯೇ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ರಾಜೀವ್ ನಗರದಲ್ಲಿ ನಡೆದಿದೆ. ಶಿವಮೊಗ್ಗ ಮೂಲದ ಶಹನಾಜ್(30) ಕೊಲೆಯಾದ ಮಹಿಳೆ. ಹಾವೇರಿ ಮೂಲದ ರಫೀಕ್ ಅಹಮ್ಮದ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಘಟನೆಯ ಹಿನ್ನೆಲೆ ಏನು?: ಇಬ್ಬರು ಹದಿಮೂರು ವರ್ಷಗಳ ಹಿಂದೆ ಪ್ರೀತಿಸಿ, ಕುಟುಂಬದ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ಹಾವೇರಿ ಮೂಲದವನಾದ ರಫೀಕ್ ಜೆಸಿಬಿ ಆಪರೇಟರ್ ಕೆಲಸಕ್ಕೆಂದು ಶಿವಮೊಗ್ಗಕ್ಕೆ ಬಂದಿದ್ದಾಗ ಇಬ್ಬರ ಮಧ್ಯೆ ಪ್ರೀತಿಯಾಗಿ, ಮದುವೆಯಾಗಿದ್ದರು. ರಫೀಕ್ ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಮಾಲೂರು ಪಟ್ಟಣದ ವೆಂಕಟೇಶ್ ಎಂಬುವರ ಬಳಿ ಜೆಸಿಬಿ ಆರಪರೇಟರ್ ಆಗಿ ಬಂದು ಕೆಲಸಕ್ಕೆ ಸೇರಿಕೊಂಡಿದ್ದ. ರಾಜೀವ್ ನಗರದ ನಾಸೀರ್ ಎಂಬುವರ ಮನೆ ಬಾಡಿಗೆಗೆ ಪಡೆದು ತಮ್ಮ ಹೆಂಡತಿ ಶಹನಾಜ್ ಳೊಂದಿಗೆ ಸಂಸಾರ ಸಾಗಿಸುತ್ತಿದ್ದ.
ಮದುವೆಯಾದ ನಂತರ ಸಂಸಾರ ಚೆನ್ನಾಗಿಯೇ ಇತ್ತು. ಆದರೆ, ಎರಡು ಮೂರು ವರ್ಷಗಳ ನಂತರ ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ರಫೀಕ್ ಕುಡಿತದ ದಾಸನಾಗಿದ್ದು, ನಿತ್ಯ ಕುಡಿದು ಬಂದು ಹೆಂಡತಿ ಹೊಡೆಯೋದು ಮಾಮೂಲಿಯಾಗಿತ್ತು. ಕುಡಿಯೋದಕ್ಕೆ ಕಾಸಿಲ್ಲ ಎಂದರೆ, ಮನೆಯಲ್ಲಿರುವ ಯಾವುದೋ ಒಂದು ವಸ್ತುವನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡೋದು ಕುಡಿಯೋದು ಮಾಡುತ್ತಿದ್ದನು.
ಹೀಗಿರುವಾಗಲೇ ಹಲವು ಬಾರಿ ಕುಟುಂಬಸ್ಥರ ನಡುವೆ, ಪೊಲೀಸ್ ಠಾಣೆಯಲ್ಲಿ ಹಾಗೂ ಮಸೀದಿಯಲ್ಲೂ ರಾಜಿ ಪಂಚಾಯ್ತಿ ಮಾಡುವ ಕೆಲಸ ಕೂಡಾ ನಡೆದಿತ್ತು. ಆದರೂ ರಪೀಕ್ ಮಾತ್ರ ಬುದ್ದಿ ಕಲಿತಿರಲಿಲ್ಲ ಕುಡಿಯೋದನ್ನು ಬಿಟ್ಟಿರಲಿಲ್ಲ ಕುಡಿದು ಮನೆಗೆ ಬಂದು ಹೆಂಡತಿಯನ್ನು ಹೊಡೆಯೋದನ್ನು ಬಿಟ್ಟಿರಲಿಲ್ಲ. ಇಬ್ಬರಿಗೂ ಮಕ್ಕಳಾಗಿಲ್ಲ ಅನ್ನೋ ಕೊರಗು ಬೇರೆ ಇತ್ತು. ಹೀಗಿರುವಾಗಲೇ ನಿನ್ನೆ ಬೆಳಗಿನ ಜಾವ ಕುಡಿಯೋದಕ್ಕೆ ಹಣಕೊಟ್ಟಿಲ್ಲ ಎನ್ನುವ ಕಾರಣಕ್ಕೆ ರಫೀಕ್ ತನ್ನ ಹೆಂಡತಿ ಶಹನಾಜ್ಳನ್ನು ಹೊಡೆದು ಕೊಂದು ಪರಾರಿಯಾಗಿದ್ದಾನೆ ಎನ್ನುವುದು ಕುಟುಂಬಸ್ಥರ ಅರೋಪ. ಅಲ್ಲದೇ ಹೆಂಡತಿಯನ್ನು ಕೊಲೆ ಮಾಡಿರುವ ಆರೋಪಿ ರಫೀಕ್ ಪರಾರಿಯಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಅನ್ನೋದು ಕುಟುಂಬಸ್ಥರ ಆಗ್ರಹವಾಗಿದೆ.
ಈ ಬಗ್ಗೆ ಪೊಲೀಸರು ಹೇಳುವುದಿಷ್ಟು: ಕೋಲಾರದ ಎಸ್ಪಿ ನಾರಾಯಣ್ ಅವರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ‘‘ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಚಿಕ್ಕ ಎಡಗೋಡು ಗ್ರಾಮದ ರಫೀಕ್ ಎಂಬಾತ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ತಿರುವಳ್ಳಿ ಗ್ರಾಮದ ಶಹನಾಜ್ ಎಂಬಾಕೆಯನ್ನು ಕಳೆದ ಹದಿಮೂರು ವರ್ಷಗಳ ಹಿಂದೆ ಮದುವೆಯಾಗಿದ್ದನು. ಇಬ್ಬರೂ ರಾಜೀವ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇಬ್ಬರಿಗೂ ಮಕ್ಕಳಾಗಿರಲಿಲ್ಲ. ನಿನ್ನೆ ರಾತ್ರಿ ಯಾವುದೋ ವಿಷಯಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದ್ದು, ರಫೀಕ್ ಕಬ್ಬಿಣದ ರಾಡ್ನಿಂದ ತನ್ನ ಹೆಂಡತಿ ಶಹನಾಜ್ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಅದಾದ ನಂತರ ಮುಂಜಾನೆ ಸುಮಾರು 5 ಗಂಟೆಗೆ ಯಾರದ್ದೋ ಮನೆಗೆ ಹೋಗಿ ಮೊಬೈಲ್ನ ಅಡವಿಟ್ಟು ಒಂದು ಸಾವಿರ ರೂಪಾಯಿ ಹಣ ಕೇಳಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆರೋಪಿ ಗಂಡನನ್ನು ಹುಡುಕುವ ಪ್ರಯತ್ನದಲ್ಲಿದ್ದೇವೆ. ಮೇಲ್ನೋಟಕ್ಕೆ ಕೌಟುಂಬಿಕ ಕಲಹಕ್ಕೆ ಕೊಲೆ ಜರುಗಿರುವುದು ಎಂದು ಹೇಳಲಾಗುತ್ತಿದೆ. ಆರೋಪಿ ಸಿಕ್ಕ ನಂತರ ಕೊಲೆ ಕಾರಣ ತಿಳಿದು ಬರಬೇಕಿದೆ‘‘ ಎಂದು ಹೇಳಿದ್ದಾರೆ.
ಇದನ್ನೂ ಓದಿ: Bengaluru crime: ಹೋಟೆಲ್ ಕ್ಯಾಶಿಯರ್ ಭೀಕರ ಹತ್ಯೆ.. ತಲೆಮರೆಸಿಕೊಂಡಿರುವ ಆರೋಪಿ ಹೌಸ್ ಕೀಪರ್