ಕೋಲಾರ : ಆತ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ತಂದೆ. ಅಲ್ಲದೇ ಮನುಷ್ಯತ್ವ ಇಲ್ಲದ ಯಾವುದೇ ಮೃಗೀಯವಾಗಿ ವರ್ತಿಸಿರುವ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ನಡೆದಿದೆ. ಭವಿಷ್ಯದಲ್ಲಿ ವೈದ್ಯನಾಗಬೇಕೆಂಬ ಕನಸು ಕಾಣುತ್ತಿದ್ದ ಪುಟ್ಟ ಬಾಲಕನನ್ನು ಆತನ ತಂದೆಯೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕಳೆದ ಐದು ವರ್ಷದ ಹಿಂದೆ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದ. ಈಗ ಮಗನನ್ನು ಸಹ ಕೊಂದಿದ್ದಾನೆ.
ತಂದೆಯ ಕೃತ್ಯದಿಂದ ಮಗ ರಕ್ತದ ಮಡುವಿನಲ್ಲಿ ಬಿದ್ದಿರುವ ಘಟನೆ ಮನಕಲಕುವಂತಿತ್ತು. ಮತ್ತೊಂದೆಡೆ ಮೊಮ್ಮಗನ ಕಳೆದುಕೊಂಡು ಅಜ್ಜಿ ಕಣ್ಣೀರು ಹಾಕುತ್ತಿರುವ ದೃಶ್ಯ ಕರಳು ಹಿಂಡುವಂತಿತ್ತು. ಇವತ್ತು ಬೆಳಗ್ಗೆ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದಲ್ಲಿ ಜನರು ಏಳುವ ಮೊದಲೇ ಬೆಚ್ಚಿ ಬೀಳುವಂತಹ ಸುದ್ದಿ ಹರಡತೊಡಗಿತ್ತು. ತಂದೆಯೇ ತನ್ನ 8 ವರ್ಷದ ಮಗನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ ಅನ್ನೋ ಸುದ್ದಿ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿತ್ತು.
ಮಗನನ್ನೇ ಕೊಂದ ಕ್ರೂರಿ ತಂದೆ : ಹೌದು, ಸುಬ್ರಮಣ್ಯಂ ಎಂಬ ವ್ಯಕ್ತಿ ಮಾನಸಿಕ ಸ್ಥಿಮಿತ ಕಳೆದುಕೊಂಡು ದುಷ್ಕೃತ್ಯ ಎಸಗಿರುವ ತಂದೆ. ತನ್ನ 8 ವರ್ಷದ ಮಗನನ್ನು ಕೊಲೆ ಮಾಡಿದ್ದಾನೆ. ಅಷ್ಟಕ್ಕೂ ಅಲ್ಲಿ ನಡೆದಿದ್ದಾದರೂ ಏನು ಅನ್ನೋದಾದ್ರೆ, ಚಿಕ್ಕವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ಬಾಲಕ ವೈದ್ಯನಾಗಬೇಕೆಂಬ ಕನಸು ಕಂಡಿದ್ದ. ಆದ್ರೆ ತಂದೆಯ ಕ್ರೌರ್ಯಕ್ಕೆ ಬಾಲಕ ಬಲಿಯಾಗಿದ್ದಾನೆ. ಸೋಮವಾರ ಬೆಂಗಳೂರಿನಿಂದ ಮಧ್ಯಾಹ್ನ ಬಂದಿದ್ದ ತಂದೆ ಸುಬ್ರಮಣ್ಯಂ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಮಗನನ್ನು ಮನೆಗೆ ಕರೆದುಕೊಂಡು ಬಂದಿದ್ದ. ಶಾಲೆಯಿಂದ ಕರೆತಂದ ಸುಬ್ರಹ್ಮಣ್ಯಂ ಕೋಲಾರದ ಗದ್ದೆಕಣ್ಣೂರು ಬಳಿ ಕರೆದುಕೊಂಡು ಬಂದು ಭಿಕ್ಷೆ ಬೇಡಲು ಬಿಟ್ಟಿದ್ದ. ಶಾಲೆಯ ಸಮವಸ್ತ್ರ ಧರಿಸಿದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸಾರ್ವಜನಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಲಕನನ್ನು ವಿಚಾರಿಸಿದಾಗ ನಂಗಲಿ ಗ್ರಾಮದಲ್ಲಿ ಅಜ್ಜಿ ಮನೆಯಿದ್ದು, ತಂದೆ ಇಲ್ಲಿಗೆ ಕರೆದುಕೊಂಡು ಬಂದಿರುವುದಾಗಿ ತಿಳಿಸಿದ್ದನಂತೆ.
ಮನೆಯಲ್ಲೇ ಮಗುವಿನ ಕುತ್ತಿಗೆ ಸೀಳಿ ಕೊಲೆ: ಆದರೆ, ಯಾವುದಕ್ಕೂ ಇರಲಿ ಎಂದು ಅಜ್ಜಿಯನ್ನು ಕರೆಸಿ ವಿಚಾರಣೆ ನಡೆಸಿದ ಪೊಲೀಸರು ಬಾಲಕನ ಒಪ್ಪಿಗೆಯಂತೆ ಆತನನ್ನು ಅಜ್ಜಿಯ ಜೊತೆಗೆ ಕಳಿಸಿ, ತಂದೆ ಸುಬ್ರಮಣ್ಯಂನನ್ನು ಬೆಂಗಳೂರಿಗೆ ಹೋಗಲು ತಿಳಿಸಿದ್ದಾರೆ. ಆದರೆ ಬೆಂಗಳೂರಿಗೆ ಹೋಗದ ತಂದೆ ಸುಬ್ರಮಣ್ಯಂ ಅಜ್ಜಿ ಮನೆಗೆ ಬರುವ ಮೊದಲೇ ಮಗನನ್ನು ಮನೆಗೆ ಬಿಡುವುದಾಗಿ ಕರೆದುಕೊಂಡು ಹೋಗಿ ಮನೆಯಲ್ಲೇ ಮಗನನ್ನು ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಕಳೆದ ಎಂಟು ವರ್ಷದ ಹಿಂದೆ ಶ್ರೀನಿವಾಸಪುರ ತಾಲೂಕಿನ ಕತ್ತಿಬಿಸೇನಹಳ್ಳಿ ಗ್ರಾಮದ ಸುಮಾ ಎಂಬುವರನ್ನು ಮುಳಬಾಗಲು ತಾಲೂಕಿನ ಪಟ್ರಹಳ್ಳಿ ಗ್ರಾಮದ ಸುಬ್ರಹ್ಮಣ್ಯಂ ಎಂಬುವರಿಗೆ ಮದುವೆ ಮಾಡಿಕೊಡಲಾಗಿತ್ತು. ಟೈಲ್ಸ್ ಮತ್ತು ಗಾರೆ ಕೆಲಸ ಮಾಡುತ್ತಿದ್ದ ಸುಬ್ರಮಣ್ಯಂ ಅವರು ಆನೇಕಲ್ ನಲ್ಲಿ ವಾಸವಾಗಿದ್ದ. ಐದು ವರ್ಷಗಳ ಕಾಲ ಚೆನ್ನಾಗಿದ್ದ ಸುಬ್ರಮಣ್ಯಂ ನಂತರ ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಮನೆಯಲ್ಲಿ ಆಗಾಗ ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದ. ಕಳೆದ 5 ವರ್ಷದ ಹಿಂದೆ ಆನೇಕಲ್ ಮನೆಯಲ್ಲಿ ಹೆಂಡತಿಯನ್ನು ಕೊಲೆ ಮಾಡಿದ್ದ. ಇದರ ಬಗ್ಗೆ ಪತಿಯ ಸಂಬಂಧಿಕರು ದೂರಿನನ್ವಯ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು ಎಂದು ಎಸ್ಪಿ ನಾರಾಯಣ ಅವರು ಮಾಹಿತಿ ನೀಡಿದ್ದಾರೆ.
ನಂಗಲಿ ಪೊಲೀಸರಿಂದ ಆರೋಪಿ ಬಂಧನ : ಈ ಸಂದರ್ಭದಲ್ಲಿ ಒಂದೂವರೆ ವರ್ಷದ ಮಗುವನ್ನು ಸುಮಾ ಸಂಬಂಧಿಕರು ತಮ್ಮ ಮನೆಗೆ ಕರೆದುಕೊಂಡು ಬಂದು ಸಾಕುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ಸುಬ್ರಹ್ಮಣ್ಯಂ ಜೈಲಿನಿಂದ ಹೊರಬಂದ ಮೇಲೆ ಮಾನಸಿಕ ಸ್ಥಿಮಿತತೆ ಕಳೆದುಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಯನ್ನು ಸಹ ಕೊಡಿಸಲಾಗಿತ್ತು. ಇನ್ನು ಸುಮಾ ಸಂಬಂಧಿಕರ ಮನೆಯಲ್ಲಿದ್ದ ಮಗನನ್ನು ತಾನೇ ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿ ಕರೆದುಕೊಂಡು ಬಂದು ತನ್ನ ತಾಯಿ ಸುಬ್ಬಲಕ್ಷ್ಮೀ ಜೊತೆ ನಂಗಲಿಯಲ್ಲಿ ಬಾಡಿಗೆ ಮನೆಯಲ್ಲಿ ತಂದೆ ಸುಬ್ರಹ್ಮಣ್ಯಂ ಬಿಟ್ಟಿದ್ದ. ಆದ್ರೆ ಸೋಮವಾರ ರಾತ್ರಿ 10.40 ಸಮಯದಲ್ಲಿ ತನ್ನ ಮಗನನ್ನು ಕೊಂದು ತಾಯಿ ಮೇಲೆ ಸಹ ಹಲ್ಲೆಗೆ ಯತ್ನಿಸಿದ್ದಾನೆ. ಬೆಳಗ್ಗೆ ಈ ವಿಷಯ ತಿಳಿದು ಸ್ಥಳಕ್ಕೆ ಬಂದ ನಂಗಲಿ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲು ಮಾಡಿರುವ ವಿವರಿಸಿದ್ದಾರೆ.
ಈ ಕುರಿತು ಬಾಲಕನ ಅಜ್ಜಿ ಸುಬ್ಬಲಕ್ಷ್ಮೀ ಅವರು ಪ್ರತಿಕ್ರಿಯಿಸಿದ್ದು, ನನ್ನ ಮೊಮ್ಮಗನನ್ನು ಸ್ಕೂಲ್ನಿಂದ ಕರೆದುಕೊಂಡು ಹೋಗಿದ್ದಾರೆ. ಆಗ ಅವನು ಹುಡುಕಾಡಿಕೊಂಡು ಕಾಸನ್ನು ಕೇಳಿಕೊಂಡು ಹೋಗಿದ್ದಾನೆ. ಆಗ ಅಲ್ಲಿನ ಸ್ಥಳೀಯರು ಬಾಲಕನ ಯೂನಿಫಾರ್ಮ್ ನೋಡಿ, ಯಾವ ಊರು ನಿನ್ನದು? ಎಂದು ವಿಚಾರಿಸಿದ್ದಾರೆ. ನಂತರ ಮೊಮ್ಮಗ ನಮ್ಮ ತಂದೆ ಶಾಲೆಯಿಂದ ಕರೆದುಕೊಂಡು ಬಂದು ಇಲ್ಲಿ ಬಿಟ್ಟು ಹೋಗಿದ್ದಾರೆ ಎಂದಿದ್ದಾನೆ. ನಂತರ ಪೊಲೀಸರಿಗೆ ವಿಚಾರ ತಿಳಿದಿದ್ದರಿಂದ ಅವರು ಠಾಣೆಗೆ ಕರೆದುಕೊಂಡು ಹೋಗಿ ನನಗೆ ಕರೆ ಮಾಡಿದ್ದರು ಎಂದು ತಿಳಿಸಿದರು.
ಆರೋಪಿ ಬಂಧಿಸಿ ಪ್ರಕರಣ ದಾಖಲು: ಸುಬ್ರಮಣ್ಯಂ ಎಂಬ ವ್ಯಕ್ತಿ (35) ಅವನಿಗೆ ಮಾನಸಿಕ ಸ್ಥಿಮಿತತೆ ಸರಿಯಿಲ್ಲದ ಕಾರಣ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿದ್ದಾನೆ. ಕಳೆದ ಮೂರು ವರ್ಷದ ಹಿಂದೆ ಹೆಂಡತಿಯನ್ನು ಕೊಂದಿದ್ದ. ಹೀಗಾಗಿ ಜೈಲು ಶಿಕ್ಷೆ ಅನುಭವಿಸಿ ಈಗ ಆಚೆ ಬಂದಿದ್ದಾನೆ. ಇವನಿಗೆ ಒಬ್ಬ ಮಗನಿದ್ದಾನೆ. ಅವನನ್ನು ತಾಯಿ ಮನೆಕಡೆಯವರು ಸಾಕುತ್ತೇವೆ ಎಂದು ಹೇಳಿದಾಗ ಬೇಡ ನಾನೇ ನೋಡಿಕೊಳ್ಳುತ್ತೇನೆ ಎಂದು ಹೇಳಿ ಬಾಡಿಗೆ ಮನೆ ಮಾಡಿ ತಾಯಿ ಸುಬ್ಬಲಕ್ಷ್ಮೀ ಎಂಬುವವರ ಜತೆ ಬಿಟ್ಟಿದ್ದಾನೆ. ಆದರೆ ಆರೋಪಿ ಸುಬ್ರಮಣ್ಯಂ ಮಗನನ್ನು ರಾತ್ರಿ ಕೊಲೆ ಮಾಡಿದ್ದಾನೆ. ಈಗಾಗಲೇ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ನಾರಾಯಣ ತಿಳಿಸಿದ್ದಾರೆ.
ಇದನ್ನೂ ಓದಿ : ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದ ಹುಬ್ಬಳ್ಳಿ ಉದ್ಯಮಿ ಗಡಿಪಾರು