ಕೋಲಾರ: ಪೊಲೀಸರ ಸೋಗಿನಲ್ಲಿ ವ್ಯಕ್ತಿಯನ್ನ ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ರಕ್ತಚಂದನ ಸಾಗಣೆ ಮಾಹಿತಿ ಮೇರೆಗೆ ಆಂಧ್ರ ಪೊಲೀಸರು ಎಂದು ಹೇಳಿ ದಾಳಿ ಮಾಡಿದ್ದ ನಕಲಿ ಗ್ಯಾಂಗ್ ಅನ್ನು ಕೋಲಾರದ ಪೊಲೀಸರು ಬಂಧಿಸಿದ್ದಾರೆ. ಸಶಸ್ತ್ರ ಮೀಸಲು ಪಡೆಯ ಇಬ್ಬರು ಡಿಎಆರ್ ಪೇದೆಗಳು, ಒಬ್ಬ ಸಾರಿಗೆ ಬಸ್ ನೌಕರ, ಅರಣ್ಯ ಇಲಾಖೆ ಗಾರ್ಡ್, ಬೆಸ್ಕಾಂ ನೌಕರ ಸೇರಿ ಆರು ಜನ ಕೃತ್ಯ ಎಸಗಿರುವುದು ಇದೀಗ ಬೆಳಕಿಗೆ ಬಂದಿದೆ.
ನಕಲಿ ಪೊಲೀಸರ ಬಂಧನ: ಕೋಲಾರ ಡಿಎಆರ್ ಪೇದೆಗಳಾದ ವೇಣುಗೋಪಾಲ್ ಹಾಗೂ ಬಸವರಾಜ್ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ವೇಣು ಗೋಪಾಲ್ ಜಿಲ್ಲಾ ಸತ್ತ್ರ ನ್ಯಾಯಾಧೀಶರ ಗನ್ ಮ್ಯಾನ್ ಆಗಿದ್ದು, ಸಾರಿಗೆ ಸಂಸ್ಥೆ ನೌಕರ ಉದಯ್, ಅರಣ್ಯ ಇಲಾಖೆ ಗಾರ್ಡ್ ನವೀನ್ ಹಾಗೂ ಮಾರ್ಕೊಂಡ, ಹರ್ಷದ್ ಎಂಬುವವರನ್ನು ಬಂಧಿಸಲಾಗಿದೆ.
ಕೋಲಾರ ದರೋಡೆ ಪ್ರಕರಣ ಹಿನ್ನೆಲೆ
ಮೊನ್ನೆ ರಾತ್ರಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಚಿಕ್ಕ ಕುಂತೂರು ಗ್ರಾಮದ ಬಳಿ ಸ್ಕಾರ್ಪಿಯೋ ಕಾರ್ ಅಡ್ಡಗಟ್ಟಿ ರಕ್ತ ಚಂದನ ಸಾಗಣೆ ಆರೋಪದಲ್ಲಿ ಆಂಧ್ರಪ್ರದೇಶ ಪೊಲೀಸರೆಂದು ಹೇಳಿ ಈ ಗ್ಯಾಂಗ್ ದಾಳಿ ಮಾಡಿತ್ತು. ಹೊಸಕೋಟೆ ಮೂಲದ ಶಬ್ಬೀರ್ ಬೇಗ್ ಎಂಬುವವನ ಮೇಲೆ ದಾಳಿ ನಡೆದಿತ್ತು.
ಶಬ್ಬೀರ್ ಬಳಿ ಇದ್ದ ಹಣ ಹಾಗೂ ಮೊಬೈಲ್, ಕಾರ್ ಕಿತ್ತುಕೊಂಡು ಪರಾರಿಯಾಗಿದ್ದರು. ನಂತರ ಶಬ್ಬೀರ್ ಬೇಗ್ ಗಲ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ನಾಲ್ಕು ಜನ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.