ಕೋಲಾರ: ಆದಾಯ ಮೀರಿ ಆಸ್ತಿ ಗಳಿಕೆ ಮಾಡಿದ್ದ ಹಿನ್ನೆಲೆ ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯನ್ನ ಅಮಾನತು ಮಾಡಲಾಗಿದೆ.
ಕಳೆದ ಜನವರಿ 2 ರಂದು ಡಿಹೆಚ್ಒ ವಿಜಯ್ ಕುಮಾರ್ ಎಂಬುವರ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಚಿನ್ನ ಸೇರಿದಂತೆ ಮಹತ್ವದ ದಾಖಲೆಗಳನ್ನ ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆದಿತ್ತು.
ಆದಾಯ ಮೀರಿ ಆಸ್ತಿ ಗಳಿಕೆ ಮಾಡಿರುವುದು ಕಂಡು ಬಂದ ಹಿನ್ನೆಲೆ ಸರ್ಕಾರ ಈ ಕ್ರಮಕೈಗೊಂಡಿದ್ದು, ವಿಜಯ್ ಕುಮಾರ್ ಅವರನ್ನ ಅಮಾನತುಗೊಳಿಸಲಾಗಿದೆ.
ಆದಾಯಕ್ಕಿಂತಲೂ ಶೇ.343 ರಷ್ಟು ಹೆಚ್ಚು ಅಕ್ರಮ ಆಸ್ತಿ ಗಳಿಸಿದ್ದು, ಅಮಾನತಿಗೆ ಒಳಗಾಗಿದ್ದಾರೆ. ಈ ಸಂಬಂಧ ಡಿಹೆಚ್ಒ ವಿಜಯ್ ಕುಮಾರ್ ಅವರ ವಿರುದ್ಧ ಸಾಕಷ್ಟು ಬಾರಿ ಹಲವಾರು ಸಂಘಟನೆಯವರು ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಹಲವಾರು ವರ್ಷಗಳಿಂದ ಕೋಲಾರದಲ್ಲಿಯೇ ಕುರ್ಚಿಗೆ ಅಂಟಿಕೊಂಡಿದ್ದು, ಇವರ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬಂದಿತ್ತು.