ಕೋಲಾರ: ಕೊರೊನಾ ಸೋಂಕಿನ ಹಿನ್ನೆಲೆ ಜಿಲ್ಲೆಗೆ ಹೊರ ರಾಜ್ಯ ಅಥವಾ ಹೊರ ಜಿಲ್ಲೆಯಿಂದ ಸೋಂಕು ಹರಡುವ ಸಂಭವ ಇರುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಜಿಲ್ಲಾಧಿಕಾರಿ ಸತ್ಯಭಾಮ ಅಧಿಕಾರಿಗಳ ಸಭೆ ನಡೆಸಿ ಜಿಲ್ಲೆಗೆ ಸಂಪೂರ್ಣ ಅಷ್ಟದಿಗ್ಬಂಧನ ವಿಧಿಸಿದ್ದಾರೆ.
ಹೊರ ರಾಜ್ಯಗಳ ಸಂಪರ್ಕ ಹೊಂದಿರುವುದರಿಂದ ಒಟ್ಟು 12 ಅಂತರಾಜ್ಯ ಚೆಕ್ ಪೋಸ್ಟ್ಗಳನ್ನು ಮಾಡಿ ಗಡಿಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಅಲ್ಲಿಂದಲೂ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿಲ್ಲ, ಇಲ್ಲಿಂದಲೂ ಅಲ್ಲಿಗೆ ವಾಹನ ಸಂಚಾರವನ್ನು ನಿಲ್ಲಿಸಲಾಗಿದೆ. ಅಷ್ಟೇ ಅಲ್ಲಾ ಅಕ್ಕ ಪಕ್ಕದ ಜಿಲ್ಲೆಗಳು ಅದರಲ್ಲೂ ಚಿಕ್ಕಬಳ್ಳಾಪುರದಲ್ಲೂ ಕೊರೊನಾ ಸೋಂಕಿತರು ಇರುವ ಹಿನ್ನೆಲೆ, ಆ ಜಿಲ್ಲೆಗಳಿಗೂ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಲು ಅಂತರ್ ಜಿಲ್ಲೆಯಲ್ಲಿ ಒಟ್ಟು 5 ಚೆಕ್ ಪೋಸ್ಟ್ಗಳನ್ನು ಮಾಡಲಾಗಿದೆ. ಇನ್ನು ಜಿಲ್ಲೆಯೊಳಗೂ ಮಸೀದಿ, ಮಂದಿರ ಚರ್ಚ್ಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಲಾಗಿದೆ.
ಮಾರ್ಚ್ 31ರ ವರೆಗೆ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ, ಈ ವರೆಗೆ ಕೋಲಾರ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಸೋಂಕಿತರು ಪತ್ತೆಯಾಗಿಲ್ಲ. ಆದರೆ ಹೊರ ದೇಶಗಳಿಂದ ಬಂದಿರುವ ಸುಮಾರು 138 ಜನರ ಮೇಲೆ ಆರೋಗ್ಯ ಇಲಾಖೆ ಹೋಂ ಕ್ವಾರಂಟೈನ್ ಮಾಡಿದೆ. ಇನ್ನು ಜಿಲ್ಲೆಯ ಪ್ರತಿ ಗಡಿಯಲ್ಲೂ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಚೆಕ್ ಪೋಸ್ಟ್ಗಳಲ್ಲಿ ಜನರ ಸ್ಕ್ರೀನಿಂಗ್ ಕೂಡಾ ಮಾಡಲಾಗುತ್ತಿದೆ. ಅಷ್ಟೇ ಅಲ್ಲ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಹಾಗೂ ಖಾಸಗಿ ಬಸ್ ಸಂಚಾರವನ್ನು ನಿಲ್ಲಿಸಲಾಗಿದೆ.