ಕೋಲಾರ: ಕಟಾವಿಗೆ ಬಂದಿದ್ದ ಬಾಳೆ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ 5 ಎಕರೆ ತೋಟ ನಾಶವಾಗಿದೆ. ಬಾಳೆ ಫಸಲನ್ನೇ ನಂಬಿದ್ದ ರೈತ ಇದೀಗ ಚಿಂತೆಗೀಡಾಗಿದ್ದಾನೆ.
ಕೋಲಾರದ ಕಾಕಿನತ್ತ ಗ್ರಾಮದ ರೈತ ಕೃಷ್ಣಪ್ಪ ಎಂಬುವರಿಗೆ ಸೇರಿದ್ದ ತೋಟದಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಸುಮಾರು 5 ಎಕರೆ ಪ್ರದೇಶದಲ್ಲಿ ಫಸಲಿಗೆ ಬಂದು ಬೆಳೆದು ನಿಂತಿದ್ದ ಬಾಳೆ ತೋಟ ನಾಶವಾಗಿದೆ.
ಸಾಲಮಾಡಿ ಬೆಳೆದಿದ್ದ ಬಾಳೆಯನ್ನು ಇನ್ನೇನು ಕೊಯ್ಲು ಮಾಡಿ ಮಾರುಕಟ್ಟೆಗೆ ಸಾಗಿಸಬೇಕಿತ್ತು. ಆದರೆ ಇದಕ್ಕೂ ಮೊದಲೇ ಸುಮಾರು 90 ಟನ್ ಬೆಳೆ ನಾಶವಾಗಿದ್ದು, ರೈತನಿಗೆ ದಿಕ್ಕೇ ತೋಚದಾಗಿದೆ.
ಈ ಘಟನೆ ಕುರಿತು ಬೇಸರ ವ್ಯಕ್ತಪಡಿಸಿರುವ ತೋಟದ ಮಾಲೀಕ, ಕಿಡಿಗೇಡಿಗಳು ತೋಟಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವಿಷಯ ತಿಳಿದ ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡ ಬಾಳೆ ತೋಟಕ್ಕೆ ಭೇಟಿ ನೀಡಿದೆ. ಉಪ ನಿರ್ದೇಶಕ ಮಂಜುನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪ್ರದೇಶದಲ್ಲಿ ಭಾರಿ ಸ್ಫೋಟಕ ಪತ್ತೆ!