ಕೋಲಾರ: ಜಿಲ್ಲೆಯ ವಕ್ಕಲೇರಿ ಗ್ರಾಮದಲ್ಲಿ ಕೊರೊನಾ ಪ್ರಯುಕ್ತ ಈ ಬಾರಿಯ ಗಣೇಶ ಹಬ್ಬಕ್ಕೆ ಬ್ರೇಕ್ ಹಾಕಿರುವ ಯುವಕರ ತಂಡ, ಬಡ ಜನತೆಗೆ ಆಹಾರ ಸಾಮಗ್ರಿಗಳನ್ನ ವಿತರಣೆ ಮಾಡಿದೆ.
ತಾಲೂಕಿನ ವಕ್ಕಲೇರಿ ಗ್ರಾಮದ ಶ್ರೀ ವಿನಾಯಕ ಯುವ ಸೈನ್ಯದ ವತಿಯಿಂದ ಬಡವರಿಗೆ ಆಹಾರ ಸಾಮಗ್ರಿಗಳನ್ನ ವಿತರಿಸಿದರು. ಪ್ರತಿ ವರ್ಷ ಲಕ್ಷಾಂತರ ರೂ. ಖರ್ಚು ಮಾಡಿ ಗ್ರಾಮದಲ್ಲಿ ಪ್ರಚಲಿತ ವಿದ್ಯಮಾನಗಳನ್ನ ಹೋಲುವಂತಹ ಗಣೇಶನನ್ನ ನಿರ್ಮಾಣ ಮಾಡಿ ಸಾರ್ವಜನಿಕರ ದರ್ಶನಕ್ಕೆ ಇಡುತ್ತಿದ್ದರು. ಆದ್ರೆ ಈ ಬಾರಿ ವಿಶೇಷವಾಗಿ ನಡೆದುಕೊಂಡಿದ್ದಾರೆ.
ಅಲ್ಲದೇ ಸುಮಾರು 25 ದಿನಗಳ ಕಾಲ ವಿವಿಧ ರೀತಿಯ ಪೂಜೆಗಳು ನಡೆಯುತ್ತಿದ್ದವು. ಆದ್ರೆ ಕೊರೊನಾದಿಂದಾಗಿ ಇದಕ್ಕೆಲ್ಲಾ ಬ್ರೇಕ್ ಹಾಕಿರುವ ಯುವಕರ ತಂಡ, ಈ ಬಾರಿ ಗಣೇಶ ಹಬ್ಬವನ್ನ ಆಚರಣೆ ಮಾಡದೆ, ಹಬ್ಬಕ್ಕೆ ಬಳಕೆ ಮಾಡುತ್ತಿದ್ದ ಹಣದಲ್ಲಿ, ಗ್ರಾಮದ ಮನೆ ಮನೆಗೂ ಸುಮಾರು 34 ಸಾಮಗ್ರಿಗಳುಳ್ಳ ಆಹಾರದ ಕಿಟ್ಗಳನ್ನ ವಿತರಣೆ ಮಾಡಿದ್ರು. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಆಹಾರ ಕಿಟ್ಗಳನ್ನ ವಿತರಣೆ ಮಾಡುವುದರ ಮೂಲಕ ಕೊರೊನಾ ನಿಯಮಗಳನ್ನ ಪಾಲನೆ ಮಾಡಿದ್ದಾರೆ.