ಕೊಡಗು : ನೀರಿನಲ್ಲಿ ಮುಳುಗಿ ಮೂವರು ಪ್ರವಾಸಿಗರು ಸಾವಿಗೀಡಾಗಿರುವ ಘಟನೆ ಮುಕ್ಕೋಡ್ಲು ಸಮೀಪದ ಕೋಟೆ ಅಬ್ಬಿ ಜಲಪಾತದಲ್ಲಿ ನಡೆದಿದೆ. ತೆಲಂಗಾಣ ಮೂಲದ 13 ಪ್ರವಾಸಿಗರು ಕುಶಾಲನಗರದ ಖಾಸಗಿ ಹೋಂ ಸ್ಟೇನಲ್ಲಿ ತಂಗಿದ್ದು, ಇಂದು ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮುಕೋಡ್ಲು ಸಮೀಪದ ಕೋಟೆ ಅಬ್ಬಿ ಜಲಪಾತಕ್ಕೆ ಪ್ರವಾಸಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ನೀರಿಗೆ ಇಳಿದ ಮೂವರು ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.
ಶ್ಯಾಮ್ (36), ಶಾಹಿಂದ್ರ (16) ಹಾಗೂ ಶ್ರೀಹರ್ಷ(18) ಮೃತ ದುರ್ದೈವಿಗಳು. ಜಲಪಾತ ಸುತ್ತಮುತ್ತ ಯಾರು ಇಲ್ಲದ ಕಾರಣ ಪ್ರವಾಸಿಗರ ರಕ್ಷಣೆ ಸಾಧ್ಯವಾಗಿಲ್ಲ. ಕುಶಾಲನಗರದಲ್ಲಿ ವಾಸ್ತವ್ಯ ಹೂಡಿದ್ದ ಪ್ರವಾಸಿಗರು ಮುಂಜಾನೆ ಮಡಿಕೇರಿಗೆ ಜಲಪಾತ ನೋಡಲು ಹೋಗಿದ್ದಾರೆ. ಈ ವೇಳೆ ಘಟನೆ ಸಂಭವಿಸಿದೆ. ಈ ಘಟನೆಯಿಂದ ಮೃತರ ಕುಟುಂಬ ಶೋಕಸಾಗರದಲ್ಲಿ ಮುಳುಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನೀರಿನಲ್ಲಿ ಜಲಸಮಾಧಿಯಾದವರನ್ನು ಒಂದು ಗಂಟೆ ಹುಡುಕಾಟ ನಡೆಸಿದ ಅಗ್ನಿಶಾಮಕದಳ ಸಿಬ್ಬಂದಿ ಮೂವರ ಮೃತದೇಹವನ್ನು ನೀರಿನಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಕೆರೆಯಲ್ಲಿ ಈಜಲು ಹೋಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು