ಕೊಡಗು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದೆ. ಬಿಸಿಲಿನ ತಾಪಕ್ಕೆ ಜೀವ ಸಂಕುಲಗಳಿಗೂ ಕುಡಿಯುವ ನೀರಿನ ಹಾಹಾಕಾರ ಎದುರಾಗಿದ್ದು, ತಾಪಮಾನ 32.5 ಡಿಗ್ರಿ ಸೆಲ್ಸಿಯಸ್ಗೆ ಏರಿದೆ.
ಕೊಡಗಿನ ಕೃಷಿ ಮತ್ತು ತೋಟಗಾರಿಕಾ ಇಲಾಖೆ ನೀಡಿದ ವರದಿ ಪ್ರಕಾರ ಜಿಲ್ಲೆಯ ಕೆಲವೆಡೆ ಮಾತ್ರ ಮಳೆ ಬೀಳುತ್ತಿದ್ದು. ನಗರ ಪ್ರದೇಶಗಳಲ್ಲಿ ಮಳೆ ಬಾರದಿರುವುದು ತಾಪಮಾನ ಹೆಚ್ಚಾಗುವುದಕ್ಕೆ ಕಾರಣ ಎನ್ನಲಾಗುತ್ತಿದೆ. ಈಗಾಗಲೇ ಜನ, ಜಾನುವಾರುಗಳಿಗೆ ನೀರು ಸಿಗದಂತಾಗಿದೆ.
ಕಾವೇರಿ ನದಿಯ ನೀರು ಬತ್ತುತ್ತಿದ್ದು ಸದ್ಯಕ್ಕೆ ಜಿಲ್ಲಾಡಳಿತ ಪಂಪ್ಸೆಟ್ ಬಳಕೆಗೆ ಬ್ರೇಕ್ ಹಾಕಿರುವುದರಿಂದ ಕೊಂಚ ಮಟ್ಟಿಗೆ ಕುಶಾಲನಗರ ಸುತ್ತಮುತ್ತಲಿನ ಪ್ರದೇಶಕ್ಕೆ ಕುಡಿಯುವ ನೀರಿನ ಅಭಾವ ತಪ್ಪಿದೆ. ಉಳಿದಂತೆ ಮಡಿಕೇರಿ, ಗೋಣಿಕೊಪ್ಪ,ಸೋಮವಾರಪೇಟೆ, ವಿರಾಜಪೇಟೆ ಭಾಗದಲ್ಲಿ ಒಂದೆರೆಡು ದಿನಗಳಿಗೊಮ್ಮೆ ನಗರಸಭೆ ನೀರು ಬಿಡಲಾಗುತ್ತಿದೆ. ಕೆಲವೆಡೆ ಅಂತೂ ಮಳೆಗಾಗಿ ವಿಶೇಷ, ಪೂಜೆ, ಹರಕೆಗಳು ನಡೆಯುತ್ತಿದೆ. ಮುಂಬರುವ ಯುಗಾದಿಯ ತನಕವೂ ಇದೇ ರೀತಿ ತಾಪಮಾನ ಇರಲಿದೆ ಎನ್ನಲಾಗುತ್ತಿದೆ.
ನಾಪೋಕ್ಲು ಭಾಗದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಕೊಂಚ ಮಳೆ ಆಗಿದೆ. ಈ ನಡುವೆ ಕಾಫಿ ಬೆಳೆಗಾರರು ಸ್ವಲ್ಪ ರಿಲೀಫ್ ಕಂಡಿದ್ದಾರೆ. ಇದು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಮಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ.