ಕೊಡಗು : ಕರುನಾಡ ಜೀವನದಿ ಕಾವೇರಿಯ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ತಲಕಾವೇರಿಯಲ್ಲಿ ನಾಳೆ ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಸಲ್ಲುವ ಮಕರ ಲಗ್ನದಲ್ಲಿ ಕಾವೇರಿಯು ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.
ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ತಲಕಾವೇರಿಯಲ್ಲಿ ತೀರ್ಥೋದ್ಭವವನ್ನು ಈ ಬಾರಿ ಸರಳ ರೀತಿ ಆಚರಿಸಲು ಸಿದ್ಧತೆ ನಡೆಯುತ್ತಿದೆ. ವರ್ಷಕ್ಕೊಮ್ಮೆ ಘಟಿಸುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ದೇಶದ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದರು.
ಆದರೆ, ಕೊರಾನಾ ಕಾರಣ ಈ ಬಾರಿ ಕಾವೇರಿಯ ಕುಡಿಕೆ ಬಳಿ ಸ್ನಾನಕ್ಕೆ ಅವಕಾಶ ಇರುವುದಿಲ್ಲ. ಕಡಿಮೆ ಭಕ್ತರು ತೀರ್ಥೋದ್ಭವ ಸಂದರ್ಭದಲ್ಲಿ ಭಾಗವಹಿಸಬೇಕು. ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ದೇವಾಲಯದ ಆಡಳಿತ ಮಂಡಳಿ ಸೂಚಿಸಿದೆ.