ಕೊಡಗು: ಜಿಲ್ಲಾಡಳಿತ ನೀಡಿರುವ ಸೂಚನೆಯಂತೆ 'ಸಾಮಾಜಿಕ ಅಂತರ'ವನ್ನು ಕಾಯ್ದುಕೊಂಡು ನಾವು ಜಿಲ್ಲೆಯಲ್ಲಿ ಬಸ್ಗಳನ್ನು ಓಡಿಸಿದರೆ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯನ್ನು ಹಸಿರು ವಲಯದ ವ್ಯಾಪ್ತಿಗೆ ತರಲಾಗಿದೆ. ಪರಿಣಾಮ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಸರ್ಕಾರಿ ಬಸ್ ಸೇರಿದಂತೆ ಖಾಸಗಿ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಒಟ್ಟು ಸೀಟಿನ ಶೇ. 50ರಷ್ಟು ಪ್ರಯಾಣಿಕರ ಓಡಾಟಕ್ಕೆ ಮಾತ್ರ ಅವಕಾಶ ನೀಡಿರುವುದರಿಂದ ನಾವು ನಷ್ಟ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆ ಗುಡ್ಡಗಾಡು ಪ್ರದೇಶವಾದ್ದರಿಂದ ಅಲ್ಲಲ್ಲಿ ಪ್ರಯಾಣಿಕರನ್ನು ಕರೆದೊಯ್ಯಬೇಕಾಗುತ್ತದೆ. ಇದರಿಂದ ಜಿಲ್ಲಾಡಳಿತ ನೀಡಿರುವ ಸೂಚನೆ ಪಾಲಿಸುವುದು ಕಷ್ಟ. ಈಗಾಗಲೇ ಖಾಸಗಿ ಬಸ್ ಮಾಲೀಕರು ತೀರಾ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಲಾಕ್‌ಡೌನ್ ಸಂಪೂರ್ಣ ಮುಗಿಯುವವರೆಗೂ ಜಿಲ್ಲೆಯಲ್ಲಿ ಬಸ್‌ಗಳು ಸಂಚರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಡೀಸೆಲ್ನಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಲಿ: ರಾಜ್ಯಾದ್ಯಂತ ಸಾಕಷ್ಟು ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದು, ನಮಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಡೀಸೆಲ್ ಮೇಲೆ ಶೇ. 50ರಷ್ಟು ವಿನಾಯಿತಿಯನ್ನು ನೀಡಿದರೆ ಅನುಕೂಲವಾಗಲಿದೆ. ಅಲ್ಲದೆ ಈಗಿರುವ ತೆರಿಗೆಯನ್ನು ಕಡಿತಗೊಳಿಸಬೇಕು ಎಂದು ಒತ್ತಾಯಿಸಿದ ಅವರು, ಜಿಲ್ಲೆಯಲ್ಲಿ 150 ಖಾಸಗಿ ಬಸ್‌ಗಳಿವೆ. ಮೇ 18ರವರೆಗೂ ಓಡಿಸದಿರಲು ನಿರ್ಧರಿಸಿದ್ದೇವೆ ಎಂದರು.